ಲಖನೌ: ವಾರಾಣಸಿಯಲ್ಲಿ ಈಗ ಮದುವೆ ಸಮಾರಂಭಗಳಲ್ಲಿ ಅತಿಥಿಗಳನ್ನು ಸ್ವಾಗತಿಸಲು ಹೂವು, ತಂಪು ಪಾನೀಯದ ಬದಲಾಗಿ ವಿಭಿನ್ನವಾದ ಪೇಯ 'ಕದಾ' ಕಷಾಯವನ್ನು ನೀಡಲಾಗುತ್ತಿದೆ. ಇದು, ಆಯುರ್ವೇದ ಅಂಶಗಳನ್ನು ಬಳಸಿ, ರೋಗ ನಿರೋಧಕ ಶಕ್ತಿ ವೃದ್ಧಿಸಲು ಮಾಡಿದ ಪೇಯವಾಗಿದೆ.
ಆಯುರ್ವೇದ ವೈದ್ಯರ ಪ್ರಕಾರ, ಕದಾ ಪೇಯದಲ್ಲಿ ಆಯುರ್ವೇದ ಔಷಧ ಮೂಲವಾದ ತುಳಸಿ, ಮೆಣಸು, ಜೀರಿಗೆ, ಚಕ್ಕೆ ಬಳಸಲಾಗಿದೆ. ಇದು, ಕೋವಿಡ್ ಎದುರಿಸಲು ದೇಹದಲ್ಲಿ ನಿರೋಧಕ ಶಕ್ತಿಯನ್ನು ವೃದ್ಧಿಸಲಿದೆ.
ವರದಿಗಳ ಪ್ರಕಾರ,ಮದುವೆಗಳಿಗೆ ಬರುವ ಅತಿಥಿಗಳಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸಲು ಮನವಿ ಮಾಡಲಾಗುತ್ತಿದೆ. ಆತಿಥೇಯರು ಅತಿಥಿಗಳಿಗೆ ರುಚಿಯಿಂದ ಸ್ವಲ್ಪ ಹುಳಿ ಎನಿಸುವ 'ಕದಾ' ಪೇಯವನ್ನು ನೀಡಿ ಸ್ವಾಗತಿಸುತ್ತಿದ್ದಾರೆ.
ಕ್ಷಮಿಸಿ, ಆದರೆ ಇದು ಅನಿವಾರ್ಯ. ದಯವಿಟ್ಟು ಪೇಯ ಕುಡಿಯಿರಿ, ಮಾಸ್ಕ್ ಧರಿಸಿ. ಇದು ನಿಮ್ಮನ್ನು ಸುರಕ್ಷಿತವಾಗಿ ಇರಲಿಸಲಿದೆ ಎಂದು ಮದುವೆ ಆಯೋಜಿಸಿದ್ದ ಹರತ್ ಲಾಲ್ ಚೌರಾಸಿಯಾ ಅವರು ಅಭಿಪ್ರಾಯಪಡುತ್ತಾರೆ.
ಅತಿಥಿಗಳಿಂದಲೂ ಈ ಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರತಿಯೊಬ್ಬರು ಇಂದು ತಮ್ಮ ಸುರಕ್ಷತೆ ಕುರಿತು ಹೆಚ್ಚು ಗಮನ ಕೊಡುವಂತಾಗಿದೆ. ವಾರಾಣಸಿಯಲ್ಲಿ ಹೆಚ್ಚಿನ ಪ್ರಕರಣಗಳು ವರದಿ ಆಗುತ್ತಿದ್ದು, ಪ್ರತಿಯೊಬ್ಬರೂ ಮುನ್ನೆಚ್ಚರಿಕೆ ವಹಿಸಬೇಕಾಗಿದೆ ಎಂದು ಅವರು ಹೇಳಿದರು.
ಮದುವೆ ಸಮಾರಂಭಗಳಲ್ಲಿ ಹಿಂದಿನಂತೆ ಅತಿಥಿಗಳು ನೃತ್ಯ ಮಾಡಬಹುದು. ಆದರೆ, ಅಂತರ ಕಾಯ್ದುಕೊಳ್ಳುವುದು ಅಗತ್ಯ ಎಂದು ಅವರು ಅಭಿಪ್ರಾಯಪಟ್ಟರು.