ಚಂಡೀಗಡ : ಕೇಂದ್ರದ ಹೊಸ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಶನಿವಾರ ಹರಿಯಾಣದಲ್ಲಿ ಕುಂಡ್ಲಿ- ಮನೇಸರ್- ಪಾಲ್ವಾಲ್ (ಕೆಎಂಪಿ) ತಡೆರಹಿತ ಹೆದ್ದಾರಿಯನ್ನು ಅಲ್ಲಲ್ಲಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಪೆರಿಫೆರಲ್ ಎಕ್ಸ್‌ಪ್ರೆಸ್ ವೇ ಎಂದೂ ಕರೆಯುವ 136 ಕಿ.ಮೀ ಉದ್ದದ ತಡೆರಹಿತ ಹೆದ್ದಾರಿಯನ್ನು ಪ್ರತಿಭಟನಕಾರರು ಬೆಳಿಗ್ಗೆ 8 ಗಂಟೆಯಿಂದಲೇ ಬಂದ್ ಮಾಡಿದ್ದು, ಈ ಬಂದ್ 24 ತಾಸು ಮುಂದುವರಿಯಲಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಲಖೋವಾಲ್) ಪ್ರಧಾನ ಕಾರ್ಯದರ್ಶಿ ಹರಿಂದರ್ ಸಿಂಗ್ ಲಖೋವಾಲ್ ಹೇಳಿದ್ದಾರೆ.
ಕೇಂದ್ರದ ಕೃಷಿ ಸಂಬಂಧಿತ ಕಾಯ್ದೆಗಳ ವಿರುದ್ಧ ಆಂದೋಲನ ನಡೆಸುತ್ತಿರುವ ರೈತ ಸಂಘಟನೆಗಳ ನೇತೃತ್ವ ವಹಿಸಿರುವ ಸಂಯುಕ್ತಾ ಕಿಸಾನ್ ಮೋರ್ಚಾ, ಕೆಎಂಪಿ ಎಕ್ಸ್‌ಪ್ರೆಸ್ ಹೆದ್ದಾರಿಯನ್ನು 24 ಗಂಟೆಗಳ ಕಾಲ ಬಂದ್ ಮಾಡಲು ಶುಕ್ರವಾರ ಕರೆ ನೀಡಿತ್ತು
ರಸ್ತೆ ಸಂಪೂರ್ಣ ಬಂದ್ ಮಾಡಿದ್ದರೂ, ತುರ್ತು ಸೇವೆಯ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ ಎಂದು ಪ್ರತಿಭಟನಾ ರೈತರು ಹೇಳಿದ್ದಾರೆ.