ಕರ್ನಾಟಕದಲ್ಲಿ ಕನ್ನಡ ಬಳಕೆ ಹೆಚ್ಚಿಸಲು ಹೋರಾಟಗಾರರು, ಸಂಘ ಸಂಸ್ಥೆಗಳು, ಸರ್ಕಾರ ಶ್ರಮಿಸಿವೆ. ಜನರ ಜೀವನವನ್ನು ಪ್ರಭಾವಿಸುವ ಸರ್ಕಾರಿ ವ್ಯವಸ್ಥೆಯಲ್ಲಿ ಕನ್ನಡ ಬಳಕೆ ಹೆಚ್ಚಾಗಬೇಕು ಎಂಬುದು ಮುಖ್ಯ ಆಗ್ರಹ. ಈ ನಿಟ್ಟಿನಲ್ಲಿ ಸಾಕಷ್ಟು ಬೆಳವಣಿಗೆಗಳು ಕಂಡಿದ್ದರೂ, ಸಾಗಬೇಕಾದ ಹಾದಿ ದೂರ ಇದೆ. ಆದರೆ ಕನ್ನಡ ಬಳಕೆಯ ವಿವಿಧ ಕ್ಷೇತ್ರಗಳಲ್ಲಿ ಜಾಗೃತಿ ಹಾಗೂ ಸ್ವಾಭಿಮಾನ ಮೂಡಿಸುವುದು ಮುಖ್ಯ ಎಂಬ ಮಾತು ಸಾಕಷ್ಟು ವರ್ಷಗಳಿಂದ ಕೇಳಿಬರುತ್ತಿದೆ. ಅದರ ಸಾಕಾರ ಎಂತು ಎಂಬುದೇ ಯಕ್ಷಪ್ರಶ್ನೆ. ಆ ದಿಸೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮೊದಲ ಹೆಜ್ಜೆ ಇಟ್ಟಿದೆ.
ಕರ್ನಾಟಕ ರಾಜ್ಯದಲ್ಲಿ ಕನ್ನಡ ಭಾಷೆ ಉಳಿಸಿ ಬೆಳೆಸಲು ಈ ಮೊದಲು ಕನ್ನಡ ವಿರೋಧಿ ನಿಲುವು ಕೈಗೊಂಡವರನ್ನು ತರಾಟೆಗೆ ತೆಗೆದುಕೊಳ್ಳಲಾಗುತ್ತಿತ್ತು. ಬಳಿಕ ಕನ್ನಡ ಅನುಷ್ಠಾನಕ್ಕೆ ಗಡುವು ನೀಡಲಾಗುತ್ತಿತ್ತು. ಕನ್ನಡ ಫಲಕ ಅಳವಡಿಸದ ಕಂಪನಿಗಳು, ಕೈಗಾರಿಕೆಗಳು, ಅಂಗಡಿಗಳಿಗೆ ದಂಡ ವಿಧಿಸುವುದು, ನ್ಯಾಯಾಲಯದ ತೀರ್ಪು ಕನ್ನಡದಲ್ಲಿ ನೀಡುವಂತೆ ಒತ್ತಾಯ ಮಾಡುವುದು ಈ ರೀತಿಯಲ್ಲಿ ಕನ್ನಡ ಅನುಷ್ಠಾನದ ಕಾರ್ಯ ನಡೆಯುತ್ತಿತ್ತು.
ಅದರ ಜತೆಗೆ ಈಗ ಸ್ವಯಂಪ್ರೇರಿತರಾಗಿ ಕನ್ನಡ ಭಾಷೆಯ ಉಳಿವು ಹಾಗೂ ಬೆಳವಣಿಗೆಗೆ ಅನೇಕರು ಶ್ರಮಿಸುತ್ತಿದ್ದಾರೆ. ಬಹುತೇಕರು ಈ ಅಭಿಯಾನದ ಭಾಗವಾಗಿ ಆನ್ಲೈನ್ನಲ್ಲಿ ಕನ್ನಡ ಬಳಸುತ್ತಿತ್ದಾರೆ. ತಮ್ಮ ಮೊಬೈಲ್ ಫೋನ್ಗಳಲ್ಲಿ ಕನ್ನಡದಲ್ಲಿ ಹೆಸರು ನಮೂದಿಸಿಕೊಳ್ಳುವುದು, ಸಂದೇಶ ರವಾನಿಸುವುದು ಹೀಗೆ ಕನ್ನಡ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ.
ಹೆದ್ದಾರಿಗಳು ಮತ್ತು ರಸ್ತೆಯ ಮಾರ್ಗಸೂಚಿ ಫಲಕಗಳು, ಮೈಲುಗಲ್ಲುಗಳಲ್ಲಿ ಫಲಕ ಅಳವಡಿಸುವಾಗ ಕನ್ನಡವನ್ನೇ ಪ್ರಧಾನವಾಗಿ ಬಳಸಬೇಕು. ಜಿಲ್ಲೆಯ ಪ್ರಮುಖ ರಸ್ತೆಗಳು, ವೃತ್ತಗಳಿಗೆ ಸಾಹಿತಿಗಳು, ಹಿರಿಯ ಹೋರಾಟಗಾರರು ಮತ್ತು ಸಾಧಕರ ಹೆಸರು ಇಡಬೇಕು. ಸರ್ಕಾರಿ, ಖಾಸಗಿ ಆಸ್ಪತ್ರೆಗಳು, ನರ್ಸಿಂಗ್ ಹೋಂ ಮತ್ತು ಅರೆವೈದ್ಯಕೀಯ ಸಂಸ್ಥೆಗಳು ಕನ್ನಡವನ್ನು ಕಡ್ಡಾಯವಾಗಿ ಬಳಕೆ ಮಾಡಬೇಕು ಎಂದು ಸೂಚಿಸಲಾಗಿದೆ.
ಜನಸಾಮಾನ್ಯರಲ್ಲಿ ಕನ್ನಡ ಬಳಕೆ ಹೆಚ್ಚಿಸಲು ನಡೆಯುತ್ತಿರುವ ಜಾಗೃತಿ ಅತ್ಯಾವಶ್ಯಕವಾದದ್ದು. ಕೆಲವು ಭಾಷಿಗರನ್ನು ಹೋಲಿಸಿದರೆ ಕನ್ನಡಿಗರಲ್ಲಿ ಭಾಷಾಭಿಮಾನ ಕಡಿಮೆ ಎಂಬ ಟೀಕೆಗಳು ಆಗಿಂದಾಗ್ಗೆ ಕೇಳಿಬರುತ್ತಿರುತ್ತವೆ. ಕನ್ನಡವನ್ನು ಮತ್ತಷ್ಟು ಬಳಸುವ ಮೂಲಕ ಭಾಷೆಯ ಬೆಳವಣಿಗೆಗೆ ಕೊಡುಗೆ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಅಭಿಯಾನದ ಉದ್ದೇಶ ಸರಿಯಾಗಿದೆ ಎನ್ನಬಹುದು.
ಮಾಧ್ಯಮದಲ್ಲಿ ಕನ್ನಡ: ಪ್ರತಿದಿನ ಕೋಟ್ಯಂತರ ಜನರನ್ನು ತಲುಪುವ ಮಾಧ್ಯಮಗಳಲ್ಲಿ ಕನ್ನಡ ಬಳಕೆಯಲ್ಲಿ ತಲೆದೋರುವ ಕೆಲ ಸಮಸ್ಯೆಗಳನ್ನೂ ಅಭಿಯಾನ ಗಮನಕ್ಕೆ ತಂದಿದೆ. ಉದ್ದೇಶಪೂರ್ವಕವಾಗಿ ಅಲ್ಲದಿದ್ದರೂ, ಜನರಿಗೆ ಸುದ್ದಿಯನ್ನು ಅತ್ಯಂತ ವೇಗವಾಗಿ ಮುಟ್ಟಿಸಬೇಕೆಂಬ ಧಾವಂತದಲ್ಲಿ ಆಗುವ ತಪುಪಗಳನ್ನು ಕಡಿಮೆ ಮಾಡಬೇಕು ಎಂದು ಅಭಿಯಾನದಲ್ಲಿ ಕೋರಲಾಗಿದೆ.
ಬ್ಯಾಂಕ್ನಲ್ಲಿ ಕನ್ನಡ: ಇದು ಸಾಧ್ಯವಾದರೆ ಬಹಳಷ್ಟು ಗ್ರಾಹಕರಿಗೆ ಅನುಕೂಲ. ಆದರೆ ಈ ವಿಚಾರದಲ್ಲಿ ಸಾಕಷ್ಟು ಸುಧಾರಣೆಗಳು ಆಗಬೇಕಿವೆ. ಪ್ರತಿ ಜಿಲ್ಲೆ, ತಾಲ್ಲೂಕಿನ ಬ್ಯಾಂಕುಗಳಿಗೆ ಪ್ರಾಧಿಕಾರದ ತಂಡ ತೆರಳಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದೆ. ನ್ಯಾಯಾಲಯದಲ್ಲಿ ಕನ್ನಡ ತೀರ್ಪು ಪೂರ್ಣ ಪ್ರಮಾಣದಲ್ಲಿ ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಒತ್ತಾಯ, ಬೇಡಿಕೆ ಮುಂದುವರೆದಿವೆ.
ಕೋರ್ಟ್ನಲ್ಲಿ ಕನ್ನಡ: ಕೆಲವು ನ್ಯಾಯಾಧೀಶರು ಸ್ವಯಂಪ್ರೇರಿತರಾಗಿ ಕನ್ನಡದಲ್ಲಿ ತೀರ್ಪು ನೀಡುತ್ತಿದ್ದಾರೆ. ಕೆಲ ವಕೀಲರು ಕನ್ನಡದಲ್ಲಿ ವಾದ ಮಂಡಿಸುತ್ತಿದ್ದಾರೆ. ಅದರ ಹೊರತಾಗಿ ಬಹುತೇಕರು ಇಂಗ್ಲಿಷ್ನಲ್ಲಿಯೇ ತೀರ್ಪು ನೀಡುತ್ತಿದ್ದಾರೆ. ಈ ಕುರಿತು ಪರವಿರೋಧ ಚರ್ಚೆಗಳು ನಡೆಯುತ್ತಲೇ ಇವೆ. ಮುಖ್ಯವಾಗಿ ರಾಜ್ಯ ಹೈಕೋರ್ಟ್ ನಲ್ಲಿ ಕನ್ನಡದಲ್ಲಿ ತೀರ್ಪು ನೀಡುವುದು, ಪ್ರಕ್ರಿಯೆ ನಡೆಸುವುದಕ್ಕೆ ಅನೇಕರ ಆಕ್ಷೇಪಗಳಿವೆ. ಏಕೆಂದರೆ ಇಲ್ಲಿನ ಅನೇಕ ಪ್ರಕರಣಗಳು ಸುಪ್ರೀಂ ಕೋರ್ಟ್ಗೆ ಹೋಗಬಹುದು. ಆಗ ಎಲ್ಲ ದಾಖಲೆಗಳನ್ನೂ ಇಂಗ್ಲಿಷಿಗೆ ಅನುವಾದಿಸಬೇಕು. ಅದರಲ್ಲಿ ವ್ಯತ್ಯಾಸ ವಾದರೆ ಸಮಸ್ಯೆ ಸೃಷ್ಟಿಯಾಗುತ್ತವೆ. ಆದರೆ ಜಿಲ್ಲಾ ಮಟ್ಟ ಹಾಗೂ ಅದಕ್ಕೂ ಕೆಳಗಿನ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಕನ್ನಡ ಅನುಷ್ಠಾನ ಮಾಡಬಹುದು. ಈ ನಿಟ್ಟಿನಲ್ಲಿ ನ್ಯಾಯಾಲಯಗಳಿಗೆ ತೆರಳಿ ಮನವರಿಕೆ ಮಾಡುವ ಪ್ರಯತ್ನವನ್ನು ಅಭಿಯಾನದ ಸದಸ್ಯರು ಮಾಡಿದ್ದಾರೆ.