ತಿರುವನಂತಪುರಂ : ಕೇರಳದ ವೈದ್ಯಕೀಯ ಕಾಲೇಜೊಂದರಲ್ಲಿ ಇಬ್ಬರು ವಿದ್ಯಾರ್ಥಿಗಳು ಬೋನಿ ಎಂ ಅವರ ಜನಪ್ರಿಯ ಗೀತೆ ರಾಸ್ಪುಟಿನ್ ಹಾಡಿಗೆ ನರ್ತಿಸಿದ್ದ ವಿಡಿಯೋ ವೈರಲ್ ಆಗಿತ್ತು. ಅದೀಗ ಕೋಮು ಸ್ವರೂಪ ಪಡೆದುಕೊಂಡಿದೆ.
ತ್ರಿಶ್ಶೂರ್ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಾದ ನವೀನ್ ಕೆ ರಜಾಕ್ ಮತ್ತು ಜಾನಕಿ ಓಂಕುಮಾರ್ ಇಬ್ಬರೂ ಈ ಹಾಡಿಗೆ ನರ್ತಿಸಿದ ವಿಡಿಯೋ ವೈರಲ್ ಆಗಿತ್ತು. ಇಬ್ಬರೂ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ಗಳಿಸಿದ್ದರು. ಕಾಲೇಜು ಆವರಣದಲ್ಲಿ ಈ ವಿಡಿಯೋವನ್ನು ಅವರು ಚಿತ್ರಿಸಿದ್ದರು.
ಮಾರ್ಚ್ 23ರಂದು ಮೊದಲು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಲಕ್ಷಾಂತರ ವ್ಯೂವ್ಸ್ ಮತ್ತು ಶೇರ್ ಆಗಿತ್ತು. ಜನರು ಅದನ್ನು ಮೆಚ್ಚಿಕೊಂಡು ಕಾಮೆಂಟ್ ಹಾಕಿದ್ದರು. ಆದರೆ ಕಳೆದ ಎರಡು ಮೂರು ದಿನಗಳಿಂದ ಜನರು ಈ ವಿಡಿಯೋ ನೋಡುತ್ತಿರುವ ರೀತಿ ಬದಲಾಗಿದ್ದು, ಅದಕ್ಕೆ ಕೋಮು ಬಣ್ಣ ನೀಡಲಾಗಿದೆ.
'ಜಾನಕಿ ಮತ್ತು ನವೀನ್. ವೈರಲ್ ಆಗಿರುವ ತ್ರಿಶ್ಶೂರ್ ಮೆಡಿಕಲ್ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳ ನೃತ್ಯದಲ್ಲಿ ಇರುವವರು ಜಾನಕಿ ಓಂಕುಮಾರ್ ಮತ್ತು ನವೀಕ್ ಕೆ ರಜಾಕ್. ಇದರ ಬಗ್ಗೆ ಏನೋ ಅನುಮಾನ ಮೂಡುತ್ತಿದೆ. ಜಾನಕಿಯ ಪೋಷಕರು ಹೆಚ್ಚು ಜಾಗ್ರತೆಯಿಂದ ಇರುವುದು ಒಳಿತು. ಜಾನಕಿಯ ಪತಿ ಓಂಕುಮಾರ್ ಮತ್ತು ಅವರ ಪತ್ನಿಗಾಗಿ ಪ್ರಾರ್ಥಿಸೋಣ' ಎಂದು ಕೃಷ್ಣರಾಜ್ ಎಂಬುವವರು ಫೇಸ್‌ಬುಕ್‌ನಲ್ಲಿ ಹೇಳಿದ್ದಾರೆ.
ಈ ಪೋಸ್ಟ್ ದೊಡ್ಡ ಸಂಚಲನ ಮೂಡಿಸಿದೆ. ವಿದ್ಯಾರ್ಥಿಗಳು ಮಾಡಿದ ನೃತ್ಯದಲ್ಲಿ ಅವರ ಧರ್ಮವನ್ನು ಹುಡುಕಿ ಅದಕ್ಕೆ ಕೊಮು ಬಣ್ಣ ಬಳಿಯುವುದು ಎಷ್ಟು ಸರಿ ಎಂದು ಅನೇಕರು ಪ್ರಶ್ನಿಸಿದ್ದಾರೆ. ಇನ್ನು ಅನೇಕರು ಕೃಷ್ಣರಾಜ್ ಪೋಸ್ಟ್ ಅನ್ನು ಬೆಂಬಲಿಸಿದ್ದಾರೆ. ಈ ವಿಡಿಯೋವನ್ನು ಚಿತ್ರಿಸಿ, ವೈರಲ್ ಮಾಡಿರುವುದು ಒಬ್ಬ ಮುಸ್ಲಿಂ. ಇದು ಪೂರ್ವ ನಿಯೋಜಿತ ಸಂಚು ಎಂದು ಕೆಲವರು ಹೇಳಿದ್ದಾರೆ.
ಆದರೆ ಇದಕ್ಕೆ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಸಂಘಟನೆ ಮತ್ತೊಂದು ವಿಡಿಯೋ ಮೂಲಕ ಉತ್ತರ ನೀಡಿದೆ. ಅದೇ ಹಾಡಿಗೆ ವಿದ್ಯಾರ್ಥಿಗಳೆಲ್ಲರೂ ಸೇರಿ ನರ್ತಿಸಿದ್ದಾರೆ. 'ನೀವು ದ್ವೇಷಿಸಲು ಯೋಜಿಸಿದರೆ, ನಾವು ಪ್ರತಿರೋಧಿಸಲು ನಿರ್ಧಸಿರುತ್ತೇವೆ' ಎಂದು ಅದಕ್ಕೆ ಕ್ಯಾಪ್ಷನ್ ನೀಡಿದ್ದಾರೆ.