ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯ ಮತದಾನ ಹಲವು ಪ್ರಮುಖ ಬೆಳವಣಿಗೆಗಳಿಗೆ ಸಾಕ್ಷಿಯಾಗುತ್ತಿದ್ದು, ಸೈಕಲ್ ನಲ್ಲಿ ಬಂದು ಮತದಾನ ಮಾಡುವ ಮೂಲಕ ನಟ ವಿಜಯ್ ಹಲವು ಪ್ರಶ್ನೆಗಳು ಏಳುವಂತೆ ಮಾಡಿದ್ದಾರೆ.
ಹೌದು.. ಚೆನ್ನೈನ ನೀಲಾಂಕರೈನಲ್ಲಿ ನಟ ವಿಜಯ್ ಮತ ಹಾಕಬೇಕಿತ್ತು. ಆದರೆ ನಟ ವಿಜಯ್ ತಮ್ಮ ಕಾರಿನಲ್ಲಿ ಮತಗಟ್ಟಗೆ ಬಾರದೇ ಸೈಕಲ್ ನಲ್ಲಿ ಬಂದು ಮತದಾನ ಮಾಡಿದರು. ಇದು ಹಲವರ ಹುಬ್ಬೇರಿಸಿದ್ದು, ನಟ ವಿಜಯ್ ನಡೆಗೆ ಪೆಟ್ರೋಲ್ ಬೆಲೆ ಏರಿಕೆ ಕಾರಣ ಎಂದು ಹೇಳಲಾಗುತ್ತಿದೆ. ಅಲ್ಲದೆ ಚುನಾವಣಾ ದಿನವೇ ಈ ರೀತಿ ಸೈಕಲ್ ಏರಿದ್ದರ ಬಗ್ಗೆ ಹಲವು ವ್ಯಾಖ್ಯಾನಗಳು ಕೇಳಿಬರುತ್ತಿದ್ದು, ಪೆಟ್ರೋಲ್/ಡಿಸೇಲ್ ಬೆಲೆಯನ್ನು ಏರಿಕೆ ಮಾಡುತ್ತಿದ್ದು, ಇದರಿಂದ ಜನಸಾಮಾನ್ಯರಿಗೆ ತೊಂದರೆ ಆಗುತ್ತಿದೆ. ಸರ್ಕಾರದ ಈ ನಡೆಯನ್ನು ವಿರೋಧಿಸುವ ಸಲುವಾಗಿಯೇ ವಿಜಯ್ ಮತದಾನ ಮಾಡಲು ಸೈಕಲ್ ಸವಾರಿ ಮಾಡಿದ್ದಾರೆ ಎನ್ನಲಾಗುತ್ತಿದೆ.
ಮತಗಟ್ಟೆ ಹತ್ತಿರದಲ್ಲೇ ಇದ್ದುದರಿಂದ ಸೈಕಲ್ ಏರಿ ಬಂದರು: ವಕ್ತಾರರ ಹೇಳಿಕೆ
ಇನ್ನು ವಿಜಯ್ ಸೈಕಲ್ ಏರಿ ಬಂದು ಮತಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಅವರ ವಕ್ತಾರರು ಸ್ಪಷ್ಟನೆ ನೀಡಿದ್ದು, ವಿಜಯ್ ಅವರ ಮತಹಾಕಬೇಕಿದ್ದ ಮತಗಟ್ಟೆ ಹತ್ತಿರದಲ್ಲೇ ಇದ್ದುದರಿಂದ ಅವರು ಕಾರಿನ ಬದಲಿಗೆ ಸೈಕಲ್ ನಲ್ಲಿ ಬಂದಿದ್ದಾರೆ. ಇದಕ್ಕೆ ರಾಜಕೀಯ ಬಣ್ಣ ಬೇಡು ಎಂದು ಮನವಿ ಮಾಡಿದ್ದಾರೆ.
ಸರ್ಕಾರದ ನಿರ್ಣಯಗಳನ್ನು ಸಿನಿಮಾದಲ್ಲೂ ವಿರೋಧಿಸಿದ್ದ ವಿಜಯ್
ನಟ ವಿಜಯ್ ಈ ಹಿಂದೆ ಸಾಕಷ್ಟು ಸಿನಿಮಾಗಳಲ್ಲಿ ಸರ್ಕಾರದ ನಿರ್ಣಯಗಳನ್ನು ವಿರೋಧಿಸಿದ್ದಾರೆ. ಈ ಹಿಂದೆ ತೆರೆಕಂಡು ಸೂಪರ್ ಹಿಟ್ ಆಗಿದ್ದ 'ಮೆರ್ಸಲ್' ಚಿತ್ರದಲ್ಲಿ ಜಿಎಸ್‌ಟಿ ವಿರುದ್ಧವಾಗಿ ವಿಜಯ್ ಡೈಲಾಗ್ ಹೊಡೆದಿದ್ದರು. ಅದು ಬಿಜೆಪಿ ಪಕ್ಷದ ಬೆಂಬಲಿಗರನ್ನು ಕೆರಳಿಸಿತ್ತು. ಈ ಸಂಬಂಧ ಹಲವು ಬಿಜೆಪಿ ಕಾರ್ಯಕರ್ತರು ಮೆರ್ಸೆಲ್ ಚಿತ್ರ ಮತ್ತು ವಿಜಯ್ ವಿರುದ್ಧ ಪ್ರತಿಭಟನೆ ಕೂಡ ಮಾಡಿದ್ದರು. 2017ರಲ್ಲಿ ವಿಜಯ್ ನಟನೆಯ 'ಮೆರ್ಸೆಲ್' ಸಿನಿಮಾ ತೆರೆಕಂಡಿತ್ತು. ಆ ಚಿತ್ರಕ್ಕೆ ಅಟ್ಲಿ ಕುಮಾರ್ ನಿರ್ದೇಶನ ಮಾಡಿದ್ದರು.