ಪೆರ್ಲ: ಎಣ್ಮಕಜೆ ಪಂಚಾಯಿತಿಯ ಪಡ್ರೆ ವಾಣೀನಗರ ಪ್ರದೇಶದ ಮತಗಟ್ಟೆಗಳಲ್ಲಿ ಮೂಲಸೌಕರ್ಯ ಕಲ್ಪಿಸುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿತ್ತು. ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತ ಪ್ರದೇಶ ಇದಾಗಿದ್ದು, ಬಹುತೇಕ ಮಂದಿ ನಡೆದಾಡಲು ಸಾಧ್ಯವಾಗದ, ಅಂಗವೈಕಲ್ಯ ಹೊಂದಿದ ಮತದಾರರಾಗಿದ್ದಾರೆ. ಇವರಿಗೆ ಮತಗಟ್ಟೆಯೊಳಗೆ ತೆರಳಬೇಕಾದರೆ ಇತರರು ಹೊತ್ತು ಸಾಗಬೇಕಾದ ಅನಿವಾರ್ಯತೆ ಎದುರಾಗಿತ್ತು. ನಡೆದಾಡಲಾಗದ ಮತದಾರರನ್ನು ಕುಚಿಯಲ್ಲಿ ಕುಳ್ಳಿರಿಸಿ, ನಾಲ್ಕೂ ಬದಿಯಿಂದ ಹೊತ್ತು ಸಾಗುವ ದೃಶ್ಯ ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿತ್ತು.
ಎಲ್ಲ ಮತಗಟ್ಟೆಗಳಲ್ಲೂ ಗಾಲಿಕುರ್ಚಿ ವ್ಯವಸ್ಥೆ ನಡೆಸಬೇಕಾಗಿದ್ದರೂ, ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತ ಪ್ರದೇಶವೆಂಬ ವಿಶೇಷ ಪರಿಗಣನೆಯೊಂದಿಗೆ ವಾಣೀನಗರದ ಬೂತ್‍ಗಳಿಗೆ ಈ ವ್ಯವಸ್ಥೆ ಒದಗಿಸದೆ ಅಸೌಖ್ಯಪೀಡಿತ, ವೃದ್ಧ ಹಾಗೂ ಅಂಗವೈಕಲ್ಯ ಹೊಂದಿದ ಮತದಾರರು ಹೆಚ್ಚಿನ ಸಂಕಷ್ಟ ಅನುಭವಿಸಬೇಕಾಗಿ ಬಂದಿತ್ತು. ವಾಣಿನಗರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ 204 ಹಾಗೂ 205 ಸಂಖ್ಯೆಯ ಮತಗಟ್ಟೆಗಳನ್ನು ಹೊಂದಿದ್ದು, ಎರಡರಲ್ಲೂ ಸಾವಿರಕ್ಕಿಂತ ಕಡಿಮೆ ಮತದಾರರಿದ್ದ ಕಾರಣ ಒಂದೊಂದೇ ಮತಗಟ್ಟೆಯಲ್ಲಿ ಮತಚಲಾಯಿಸಬೇಕಾಗಿ ಬಂದಿತ್ತು. ಎರಡೂ ಮತಗಟ್ಟೆಗಳಲ್ಲಿ ಮತದಾನ ವಿಳಂಬವಾಗುತ್ತಿರುವ ಬಗ್ಗೆ ಮತದಾರರು ಅಧಿಕಾರಿಗಳಲ್ಲಿ ತಮ್ಮ ಅಸಮಧಾನ ವ್ಯಕ್ತಪಡಿಸಿದರು.