ನವದೆಹಲಿ: ಇಂತಹ ದೊಡ್ಡ ಸಾಂಕ್ರಾಮಿಕ ಬಿಕ್ಕಟ್ಟಿನ ಸಂದರ್ಭದಲ್ಲೂ ಕಂಪನಿಗಳು ಲಾಭ ಗಳಿಸುತ್ತಿವೆ ಎಂದು ಹಲವು ರಾಜ್ಯಗಳು ಕೋವಿಡ್ ಲಸಿಕೆ ತಯಾರಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಸೆರಂ ಸಂಸ್ಥೆ ಮತ್ತು ಭಾರತ್ ಬಯೋಟೆಕ್‌ಗೆ ತಮ್ಮ ಕೋವಿಡ್ -19 ಲಸಿಕೆಗಳ ಬೆಲೆಯನ್ನು ಕಡಿಮೆ ಮಾಡುವಂತೆ ಸೋಮವಾರ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.
ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಲಸಿಕೆ ಬೆಲೆ ಕುರಿತು ಚರ್ಚಿಸಲಾಗಿದ್ದು, ಈಗ ಎರಡು ಕಂಪನಿಗಳು ತಮ್ಮ ಲಸಿಕೆಗಳಿಗೆ ಪರಿಷ್ಕೃತ ಬೆಲೆ ನಿಗದಿಪಡಿಸುವ ನಿರೀಕ್ಷೆಯಿದೆ.
ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ತನ್ನ ಕೋವಿಡ್ -19 ಲಸಿಕೆ ಕೋವಾಕ್ಸಿನ್ ಅನ್ನು ರಾಜ್ಯ ಸರ್ಕಾರಗಳಿಗೆ ಪ್ರತಿ ಡೋಸ್‌ಗೆ 600 ರೂ. ಮತ್ತು ಖಾಸಗಿ ಆಸ್ಪತ್ರೆಗಳಿಗೆ ಪ್ರತಿ ಡೋಸ್‌ಗೆ 1,200 ರೂ. ನಿಗದಿಪಡಿಸಿದೆ.
ವಿಶ್ವದ ಅತಿದೊಡ್ಡ ಲಸಿಕೆ ತಯಾರಕ ಪುಣೆ ಮೂಲದ ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ(ಎಸ್‌ಐಐ) ತನ್ನ ಕೋವಿಡ್ ಲಸಿಕೆ 'ಕೋವಿಶೀಲ್ಡ್' ಗೆ ರಾಜ್ಯ ಸರ್ಕಾರಗಳಿಗೆ ಪ್ರತಿ ಡೋಸ್‌ಗೆ 400 ರೂ. ಮತ್ತು ಖಾಸಗಿ ಆಸ್ಪತ್ರೆಗಳಿಗೆ ಪ್ರತಿ ಡೋಸ್‌ಗೆ 600 ರೂ. ನಿಗದಿಪಡಿಸಿದೆ.
ಈ ಎರಡೂ ಲಸಿಕೆಗಳನ್ನು ಕೇಂದ್ರ ಸರ್ಕಾರಕ್ಕೆ ಪ್ರತಿ ಡೋಸ್‌ಗೆ 150 ರೂ. ನೀಡಲಾಗುತ್ತಿದೆ. ಹೀಗಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಹಲವು ರಾಜ್ಯಗಳು ಕೇಂದ್ರ ಮತ್ತು ರಾಜ್ಯಗಳಿಗೆ ಒಂದೇ ರೀತಿಯ ದರ ನಿಗದಿಪಡಿಸುವಂತೆ ಒತ್ತಾಯಿಸಿದ್ದವು.