ಕೊಲ್ಲಂ: ಎಡ ಮತ್ತು ಬಲ ರಂಗಗಳು ದೇಶದ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯನ್ನು ನಾಶಪಡಿಸುತ್ತಿವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ. ಎಲ್‍ಡಿಎಫ್ ಮತ್ತು ಯುಡಿಎಫ್ ಗಳು ಭ್ರಷ್ಟಾಚಾರ ಮತ್ತು ಹಗರಣಗಳಲ್ಲಿ ತಮ್ಮ ಸಾಮಥ್ರ್ಯವನ್ನು ಸಾಬೀತುಪಡಿಸಿದ್ದಾರೆ ಮತ್ತು ಎನ್‍ಡಿಎ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕೇರಳದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲಿದೆ ಎಂದು ಜೆಪಿ ನಡ್ಡಾ ಕರುನಾಗಪ್ಪಳ್ಳಿಯಲ್ಲಿ ಹೇಳಿದರು. ಅಭ್ಯರ್ಥಿಗಳ ಚುನಾವಣಾ ಪ್ರಚಾರಾರ್ಥ ನಿನ್ನೆ ಎನ್‍ಡಿಎ ಆಯೋಜಿಸಿದ್ದ ಸಮಾವೇಶವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಅವರು ಮೊದಲು ಸದ್ಗುರು ಮಾತಾ ಅಮೃತಾನಂದಮಯಿ ದೇವಿ ಕುರಿತಾದ ಮಾತುಗಳಿಂದ ಭಾಷಣ ಪ್ರಾರಂಭಿಸಿದರು. ಬಳಿಕ ಪ್ರತಿಯೊಂದು ವಿಷಯದಲ್ಲೂ ಸರ್ಕಾರದ ಬಗ್ಗೆ ಕಠಿಣ ಟೀಕೆ ವ್ಯಕ್ತಪಡಿಸಿದರು. ಶಬರಿಮಲೆ ವಿಷಯವೂ ಸೇರಿದಂತೆ ಯುಡಿಎಫ್ ಬಹುತೇಕ ಮೌನ ಪ್ರೇಕ್ಷಕವಾಗಿತ್ತು. ಭಕ್ತರಿಗೆ ಶಬರಿಮಲೆಯಲ್ಲಾದ ಥಳಿತಗಳ ಸಂದರ್ಭ ಯುಡಿಎಫ್ ಮೂಕ ಪ್ರೇಕ್ಷಕವಷ್ಟೇ ಆಗಿತ್ತೆಂದು ಅವರು ತಿಳಿಸಿದರು.
ಅವರು ಕೇಂದ್ರ ಸರ್ಕಾರದ ಸಾಧನೆಗಳು ಮತ್ತು ಜನರಪರ ಯೋಜನೆಗಳನ್ನು ವಿವರಿಸಿದರು ಮತ್ತು ಪುಟ್ಟಿಂಗಲ್ ದುರಂತದ ಸಮಯದಲ್ಲಿ ಪ್ರಧಾನಿ ಮತ್ತು ಕೇಂದ್ರವು ಮಾಡಿದ ಮಧ್ಯಸ್ಥಿಕೆಗಳನ್ನು ನೆನಪಿಸಿಕೊಂಡರು. ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿಗೆ ಕೇಂದ್ರವು ಹಣ ಹಂಚಿಕೆ ಮಾಡಿದ್ದರೂ ರಾಜ್ಯ ಸರ್ಕಾರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ವಿಫಲವಾಗಿದೆ ಎಂದು ಅವರು ಆರೋಪಿಸಿದರು. ಅಭ್ಯರ್ಥಿಗಳಾದ ಬಿ.ಟಿ.ಸುಧೀರ್, ರಾಜಿ ಪ್ರಸಾದ್, ವಿವೇಕ್ ಗೋಪನ್ ಮತ್ತು ಎನ್‍ಡಿಎ ಮುಖಂಡರು ಸಮಾವೇಶದಲ್ಲಿ ಉಪಸ್ಥಿತರಿದ್ದರು. ವಿವಿಧ ರಾಜಕೀಯ ಪಕ್ಷಗಳಿಂದ ಬಿಜೆಪಿಗೆ ಬಂದವರನ್ನು ರಾಷ್ಟ್ರೀಯ ಅಧ್ಯಕ್ಷರು ಸ್ವಾಗತಿಸಿದರು.