ಕಾಸರಗೋಡು: ಸೌಮ್ಯಾ ಪ್ರಸಾದ್ ಕಿಳಿಂಗಾರು ಅವರು ಡಾ.ರಾಧಾಕೃಷ್ಣ ಬೆಳ್ಳೂರು ಅವರ ಮಾರ್ಗದರ್ಶನದಲ್ಲಿ ಬರೆದು ಸಿದ್ಧಗೊಳಿಸಿದ 'ಜಾಗತೀಕರಣದ ಸಂದರ್ಭ ಮತ್ತು ಕನ್ನಡ ಸಣ್ಣಕತೆಗಳು' ಎಂಬ ಸಂಶೋಧನ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿ ನೀಡಿದೆ.
ಸೌಮ್ಯಾ ಪ್ರಸಾದ್ ಅವರು ಈಗಾಗಲೇ ಕವಿಯತ್ರಿಯಾಗಿ, ಅಂಕಣಕಾರರಾಗಿ ಗುರುತಿಸಿಕೊಂಡವರು. 'ಸಂಚಯ' ಮಾಸಿಕ ನಡೆಸಿದ ರಾಜ್ಯಮಟ್ಟದ ವಿಮರ್ಶಾ ಸ್ಪರ್ಧೆ ಸಂಕ್ರಮಣ ಕವನ ಸ್ಪರ್ಧೆಗಳಲ್ಲಿ ಅವರು ರಾಜ್ಯಮಟ್ಟದಲ್ಲಿ ಪ್ರಥಮ ಬಹುಮಾನವನ್ನು ಈ ಹಿಂದೆ ಪಡೆದಿದ್ದರು. ಇವರ 'ವಾಮನನ ಬೆರಗು' ಚೊಚ್ಚಲ ಕವನ ಸಂಕಲನವು ಕರ್ನಾಟಕ ಸರಕಾರದ ಪುಸ್ತಕ ಪ್ರಾಧಿಕಾರದ ಧನಸಹಾಯ ಯೋಜನೆಯಡಿ ಪ್ರಕಟಗೊಂಡ ಕೃತಿ. ಖಂಡಿಗೆ ಶ್ಯಾಮ ಭಟ್ ಅವರ ಬದುಕು ಬರಹ ದ ಬಗೆಗೆ ಬರೆದ 'ಮಹಾಜನ ಖಂಡಿಗೆ ಶ್ಯಾಮ್ ಭಟ್' ಬದುಕು ಬರಹದ ಬಗೆಗೆ ಬರೆದ ಕೃತಿಯನ್ನು ಕಾಂತಾವರ ಕನ್ನಡ ಸಂಘವು ಬಿಡುಗಡೆ ಮಾಡಿದೆ. ಉದಯವಾಣಿ, ಮಯೂರ, ಹೊರನಾಡ ಕನ್ನಡಿಗ, ಸಂಕ್ರಮಣ, ಹೊಸದಿಗಂತ, ಸಂಕ್ರಾತಿ ಮುಂತಾದ ದಿನಪತ್ರಿಕೆ ಹಾಗೂ ನಿಯತಕಾಲಿಕಗಳಲ್ಲಿ ಇವರ ಸೃಜನಶೀಲ, ಸೃಜನೇತರ ಬರಹಗಳು ಪ್ರಕಟವಾಗಿವೆ. ಸಂಶೋಧನ ಮಂಗಳೂರು ಆಕಾಶವಾಣಿಯಿಂದ ಇವರ ಕವನಗಳು, ಪ್ರಬಂಧಗಳು ಪ್ರಸಾರವಾಗಿವೆ. ಕಾಸರಗೋಡಿನ 'ಉತ್ತರದೇಶ ಕನ್ನಡ'À ಪತ್ರಿಕೆಯಲ್ಲಿ ಇವರ ಅಂಕಣ 'ಮನಸಿನÀ ಮಾತು' ನೂರು ಕಂತುಗಳಲ್ಲಿ ಪ್ರಕಟವಾಗಿತ್ತು. ಭಾಷೆ, ಸಾಹಿತ್ಯ ಮತ್ತು ವಿಮರ್ಶೆ ಈ ಕ್ಷೇತ್ರಗಳಲ್ಲಿ ಬರವಣಿಗೆಯನ್ನು ಮುಂದುವರಿಸುತ್ತಿರುವ ಇವರು ಹಲವು ವಿಚಾರಗೋಷ್ಟಿಗಳಲ್ಲಿ ಪ್ರಬಂಧ ಮಂಡನೆ ಮಾಡಿರುವ ಇವರ ಸಂಶೋಧನ ಲೇಖನಗಳು ಸಂಶೋಧನ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಕ್ರಿಯಾತ್ಮಕ ಕನ್ನಡ ಕಾರ್ಯಗಳಿಂದ ಈಗಾಗಲೇ ಗುರುತಿಸಿಕೊಂಡಿರುವ ಸಿರಿಚಂದನ ಕನ್ನಡ ಯುವಬಳಗ ಸಂಸ್ಥೆಯ ಉಪಾಧ್ಯಕ್ಷೆಯಾಗಿ ಕ್ರಿಯಾತ್ಮಕವಾದ ಕನ್ನಡ ಕೈಂಕರ್ಯಗಳಲ್ಲೂ ಸೌಮ್ಯಾ ಪ್ರಸಾದ್ ದುಡಿಯುತ್ತಿದ್ದಾರೆ.
ಕುಂಟಿಕಾನ ಹಿರಿಯ ಬುನಾದಿ ಶಾಲೆ, ಮಹಾಜನ ಸಂಸ್ಕøತ ಕಾಲೇಜು ನೀರ್ಚಾಲು, ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆ ಎಡನೀರು, ಸರಕಾರಿ ಕಾಲೇಜು ಕಾಸರಗೋಡು ಹಾಗೂ ಬಿಎಡ್ ಕೇಂದ್ರ ಚಾಲ ಇಲ್ಲಿನ ಹಳೆ ವಿದ್ಯಾರ್ಥಿನಿಯಾಗಿರುವ ಅವರು ದಿ.ಪಳ್ಳ ಮಹಾಲಿಂಗ ಭಟ್ ಮತ್ತು ಮೀನಾಕ್ಷಿ ದಂಪತಿ ಪುತ್ರಿ. ಕ್ಯಾಂಪ್ಕೋ ಉದ್ಯೋಗಿ ಪ್ರಸಾದ್ ಕಿಳಿಂಗಾರು ಇವರ ಪತ್ನಿ. ಪ್ರಸ್ತುತ ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯ ಪೆರಿಯ ದಲ್ಲಿ ಪ್ರಾಧ್ಯಾಪಿಕೆಯಾಗಿ ದುಡಿಯುತ್ತಿದ್ದಾರೆ.