ಪುತ್ತೂರು: ತುಳು ಪತ್ರಿಕೋದ್ಯಮದ ಚರಿತ್ರೆಯನ್ನು ನೋಡಿದರೆ ಅದು ಪತ್ರಿಕೆಯ ಆಶಯವಾದ ಸುದ್ದಿ ಮತ್ತು ಮಾಹಿತಿಯ ಆವಶ್ಯಕತೆಯಾಗಿ ಮೂಡಿ ಬಾರದೆ, ತುಳು ಭಾಷೆ ಸಾಹಿತ್ಯ ಸಂಸ್ಕøತಿಯ ಜಾಗೃತಿ ಮತ್ತು ಎಚ್ಚರದ ಅಂಗವಾಗಿ ಉದಿಸಿ ಬಂದಿತು ಎಂದು ಕವಿ, ಸಾಹಿತಿ ಹಾಗೂ ಮಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ. ವಸಂತಕುಮಾರ ಪೆರ್ಲ ಹೇಳಿದರು.
'ಪೂವರಿ' ತುಳು ಮಾಸಿಕವು ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮಿಗಳ ಶಷ್ಠ್ಯಬ್ಧಿ ಸಮಾರಂಭದ ಅಂಗವಾಗಿ ಪುತ್ತೂರಿನಲ್ಲಿ ಹಮ್ಮಿಕೊಂಡಿದ್ದ ಮೊದಲ ರಾಷ್ಟ್ರೀಯ ತುಳು ಪತ್ರಿಕಾ ಸಮ್ಮಿಲನದ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.
ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕೆಂಬುದು ಮತ್ತು ರಾಜ್ಯಭಾಷೆಯ ಮಾನ್ಯತೆ ಕೇಳುತ್ತಿರುವುದು ಅಂತಹ ಎಚ್ಚರದ ಸಂಕೇತ. ಇದನ್ನು ತುಳು ಚಳವಳಿಯ ಮೂರನೇ ಘಟ್ಟ ಎಂದು ಕರೆಯಬಹುದು ಎಂದು ಡಾ. ಪೆರ್ಲ ಹೇಳಿದರು.
ಒಡಿಯೂರು ಶ್ರೀ ಗುರು ದೇವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತಮ್ಮ ಆಶೀರ್ವಚನದಲ್ಲಿ ಅವರು, ತುಳು ಭಾಷೆ ಉಳಿದರೆ ಮಾತ್ರ ತುಳು ಸಂಸ್ಕೃತಿ ಉಳಿಯಲು ಸಾಧ್ಯ. ತಾಯಿ ಮಕ್ಕಳ ಸಂಬಂಧದಂತೆ ಅಭಿನ್ನವಾಗಿರುವ ಭಾಷೆ-ಸಂಸ್ಕೃತಿಯನ್ನು ಎಲ್ಲರೂ ಸೇರಿ ಉಳಿಸಬೇಕಾಗಿದೆ ಎಂದರು.
'ಪೂವರಿ' ಮಾಸಿಕದ ಸಂಪಾದಕ ವಿಜಯಕುಮಾರ ಭಂಡಾರಿ ಹೆಬ್ಬಾರಬೈಲು ಅಧ್ಯಕ್ಷತೆ ವಹಿಸಿದ್ದರು. ಸ್ವತಂತ್ರವಾಗಿ ಕಾರ್ಯ ನಿರ್ವಹಿಸತೊಡಗಿದ ತುಳು ಪತ್ರಿಕಾ ರಂಗಕ್ಕೆ ಐವತ್ತು ವರ್ಷ ತುಂಬಿದ ನೆನಪಿಗೆ ಶ್ರೀಕ್ಷೇತ್ರ ಒಡಿಯೂರಿನ ಶಷ್ಠ್ಯಬ್ಧಿ ಸಮಿತಿಯೊಂದಿಗೆ ಸೇರಿ ಕಾರ್ಯಕ್ರಮ ರೂಪಿಸಿದ್ದಾಗಿ ಅವರು ತಿಳಿಸಿದರು.
ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ತುಳು ಪತ್ರಿಕಾ ರಂಗದಲ್ಲಿ ದುಡಿದ ಮ. ವಿಠಲ ಪುತ್ತೂರು, ಬಿ. ಎಂ. ಕೆ. ವಾಸು ರೈ, ಎಸ್. ಆರ್. ಬಂಡಿಮಾರ್, ಗಣನಾಥ ಶೆಟ್ಟಿ ಎಕ್ಕಾರು, ಪದ್ಮನಾಭ ಭಟ್ಟ ಎಕ್ಕಾರು, ಉಮೇಶ್ ರಾವ್ ಎಕ್ಕಾರು, ಬಿ.ಪಿ.ಶೇಣಿ, ಜಯಾ ಮಣಿಯಂಪಾರೆ, ಜಯಂತಿ ಎಸ್. ಬಂಗೇರ ಮೊದಲಾದವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಹರಿಣಾಕ್ಷಿ ಜೆ. ಶೆಟ್ಟಿ ಸ್ವಾಗತಿಸಿ, ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿದ್ಯಾಶ್ರೀ ಉಳ್ಳಾಲ ಕಾರ್ಯಕ್ರಮ ನಿರ್ವಹಿಸಿದರು. ರಾಜೇಶ್ ಆಳ್ವ ಬದಿಯಡ್ಕ ವಂದಿಸಿದರು.