ನವದೆಹಲಿ : ಕೇರಳದ ಪತ್ರಕರ್ತ ಸಿದ್ದಿಕ್ ಕಪ್ಪನ್ ಅವರನ್ನು ಉತ್ತಮ ವೈದ್ಯಕೀಯ ಚಿಕಿತ್ಸೆಗಾಗಿ ದೆಹಲಿಗೆ ಸ್ಥಳಾಂತರಿಸಿ ಎಂದು ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಸರ್ಕಾರಕ್ಕೆ ಆದೇಶಿಸಿದೆ.
ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ, ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ರಾಸ್ ಗೆ ಭೇಟಿ ನೀಡುವ ಮಾರ್ಗದ ಮಧ್ಯೆ ಉತ್ತರ ಪ್ರದೇಶ ಪೋಲೀಸರು ಕಳೆದ ವರ್ಷ ಸಿದ್ಧಿಕಿ ಕಪ್ಪನ್ ರನ್ನು ಬಂಧಿಸಿದ್ದರು.
ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ನ್ಯಾಯಪೀಠವು ಕೇರಳ ಯೂನಿಯನ್ ಆಫ್ ವರ್ಕಿಂಗ್ ಜರ್ನಲಿಸ್ಟ್ಸ್(ಕೆಯುಡಬ್ಲ್ಯೂಜೆ) ಮತ್ತು ಕಪ್ಪನ್ ಅವರ ಪತ್ನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ, ಕೂಡಲೇ ಅವರನ್ನು ದೆಹಲಿಗೆ ಶಿಫ್ಟ್ ಮಾಡುವಂತೆ ಆದೇಶಿಸಿದೆ. ಜೊತೆಗೆ ಕಪ್ಪನ್ ಚೇತರಿಸಿಕೊಂಡ ನಂತರ ಅವರನ್ನು ಮತ್ತೆ ಮಥುರಾ ಜೈಲಿಗೆ ಕಳುಹಿಸುವಂತೆ ಹೇಳಿದೆ.
ಈ ಆದೇಶಕ್ಕೂ ಮುನ್ನ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎಎಸ್ ಬೋಪಣ್ಣ ಅವರು ಉತ್ತಮ ವೈದ್ಯಕೀಯ ಚಿಕಿತ್ಸೆಗಾಗಿ ಕಪ್ಪನ್ ಅವರನ್ನು ಬೇರೆ ರಾಜ್ಯಕ್ಕೆ ಸ್ಥಳಾಂತರಿಸಬಹುದೆ ಎಂದು ಉತ್ತರ ಪ್ರದೇಶ ಸರ್ಕಾರವನ್ನು ಪ್ರಶ್ನಿಸಿತ್ತು. ಈ ವೇಳೆ ಉತ್ತರ ಪ್ರದೇಶ ಸರ್ಕಾರದ ಪರ ಹಾಜರಾದ ಮೆಹ್ತಾ, ಇದೇ ರೀತಿಯ ಹಲವಾರು ಆರೋಪಿಗಳು ರಾಜ್ಯದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಪ್ಪನ್ ಅವರಿಗೆ ವಿಶೇಷ ಚಿಕಿತ್ಸೆ ನೀಡಬಹುದೆ ಎಂಬ ಸಲಹೆಯನ್ನು ತೀವ್ರವಾಗಿ ವಿರೋಧಿಸಿದರು. ಬಹು ಅಂಗಾಂಗ ವೈಫಲ್ಯದ ಜನರನ್ನು ಮಥುರಾದ ಜೈಲು ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಈ ಕ್ಷಣದಲ್ಲಿ ಕಪ್ಪನ್‌ಗೆ ಉತ್ತಮ ಆರೋಗ್ಯ ಸೌಲಭ್ಯಗಳನ್ನು ನೀಡುವ ಸೀಮಿತ ಬೇಡಿಕೆ ಇದ್ದು ಅದಕ್ಕಾಗಿ ಅವರಿಗೆ ದೆಹಲಿಯಲ್ಲಿ ವೈದ್ಯಕೀಯ ಚಿಕಿತ್ಸೆ ನೀಡಲು ಅನುಮತಿಸಬಹುದೆ ಎಂದು ಕೇಳಿತ್ತು.
ಕಳೆದ ವರ್ಷ ನವೆಂಬರ್ 16 ರಂದು ಪತ್ರಕರ್ತನ ಬಂಧನವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಕೆಯಾಗಿದ್ದು ಉತ್ತರ ಪ್ರದೇಶ ಸರ್ಕಾರದಿಂದ ಪ್ರತಿಕ್ರಿಯೆ ಕೋರಿತ್ತು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಅಥವಾ ಪಿಎಫ್‌ಐ ಜೊತೆ ಸಂಪರ್ಕ ಹೊಂದಿದ್ದ ನಾಲ್ಕು ಜನರ ವಿರುದ್ಧ ಐಪಿಸಿ ಮತ್ತು ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಯ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಹತ್ರಾಸ್ ನಲ್ಲಿ 2020ರ ಸೆಪ್ಟೆಂಬರ್ 14 ರಂದು ಸಾಮೂಹಿಕ ಅತ್ಯಾಚಾರ ನಂತರ ದಲಿತ ಯುವತಿ ಸಾವನ್ನಪ್ಪಿದ್ದು ಆ ನಂತರ ಕಪ್ಪನ್ ಅವರನ್ನು ಪೋಲೀಸರು ಹತ್ರಾಸ್ ಗೆ ತೆರಳುವ ಮಾರ್ಗದಲ್ಲಿ ಬಂಧಿಸಿದ್ದರು. ಪೋಷಕರ ಒಪ್ಪಿಗೆಯಿಲ್ಲದೆ ಅಧಿಕಾರಿಗಳು ರಾತ್ರೋರಾತ್ರಿ ಯುವತಿಯ ಅಂತ್ಯಕ್ರಿಯೆ ನಡೆಸಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.