ಜೈಪುರ: ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿ ಎಲ್ಲ ರಾಜ್ಯಗಳಿಗೆ ಒಂದೇ ರೀತಿಯ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್‌ಒಪಿ) ಸಿದ್ಧಪಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪತ್ರ ಬರೆದಿದ್ದಾರೆ. ರಾಜ್ಯಗಳ ನಡುವೆ ಉತ್ತಮ ಸಮನ್ವಯಕ್ಕಾಗಿ ಗೆಹ್ಲೋಟ್ ಈ ಮನವಿ ಮಾಡಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
18 ವರ್ಷಕ್ಕಿಂತ ಮೇಲಿನ ಎಲ್ಲರಿಗೂ ಲಸಿಕೆ ನೀಡಲು ಆರಂಭಿಸಬೇಕು ಎಂದೂ ಅವರು ಸಲಹೆ ನೀಡಿದ್ದಾರೆ.
ಪ್ರ ಸ್ತುತ 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ದೇಶದಲ್ಲಿ ಲಸಿಕೆ ನೀಡಲಾಗುತ್ತಿದೆ. ಮೊದಲೆರಡು ಹಂತಗಳಲ್ಲಿ ಆರೋಗ್ಯ ಕಾರ್ಯಕರ್ತರು ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ಮಾತ್ರ ಲಸಿಕೆ ನೀಡಲಾಗಿತ್ತು.
ಕೋವಿಡ್ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಂಯೋಜಿತ ಮತ್ತು ಸಮಗ್ರ ಪ್ರಯತ್ನಗಳ ಅಗತ್ಯವಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕೋವಿಡ್ ನಿಯಂತ್ರಣ ವಿಚಾರದಲ್ಲಿ ರಾಜ್ಯಗಳ ನಡುವೆ ಸಮನ್ವಯದ ಕೊರತೆ ಇದೆ. ಅಂತರರಾಜ್ಯ ಪ್ರಯಾಣಕ್ಕೆ ಕಡ್ಡಾಯ ಕೋವಿಡ್ ನೆಗೆಟಿವ್ ಪ್ರಮಾಣಪತ್ರ, ಲಾಕ್‌ಡೌನ್, ರಾತ್ರಿ ಕರ್ಫ್ಯೂ, ಶೈಕ್ಷಣಿಕ ಸಂಸ್ಥೆಗಳ ಕಾರ್ಯಾಚರಣೆ ಸೇರಿ ಹಲವು ವಿಚಾರಗಳಲ್ಲಿ ರಾಜ್ಯಗಳು ಭಿನ್ನವಾಗಿ ಕಾರ್ಯಾಚರಣೆ ನಡೆಸುತ್ತಿವೆ. ಇದರಿಂದ ಸಾರ್ವಜನಿಕರಲ್ಲಿ ಗೊಂದಲ ಉಂಟಾಗುತ್ತಿದ್ದು, ಅವರಲ್ಲಿ ಆತಂಕ ಮೂಡಿಸುತ್ತಿದೆ ಎಂದೂ ಗೆಹ್ಲೋಟ್ ಹೇಳಿದ್ದಾರೆ.
ಇದನ್ನು ಮೀರಿ ಸಮನ್ವಯ ಸಾಧಿಸಲು ಒಂದೇ ರೀತಿಯ ಎಸ್‌ಒಪಿ ಅಗತ್ಯವಿದೆ. ಕೋವಿಡ್ ಹರಡುವಿಕೆ ತಡೆ ಇನ್ನಷ್ಟು ಪರಿಣಾಮಕಾರಿಯಾಗಬೇಕಿದೆ ಎಂದು ಅವರು ಹೇಳಿದ್ದಾರೆ.