ಚೆನ್ನೈ: ತಮಿಳುನಾಡು ಚುನಾವಣೆಗೆ ದಿನಗನಣೆ ಆರಂಭವಾಗಿರುವಂತೆಯೇ ಇತ್ತ ಕೇಂದ್ರ ಆದಾಯ ತೆರಿಗೆ ಅಧಿಕಾರಿಗಳು ಡಿಎಂಕೆ ಪಕ್ಷಕ್ಕೆ ಶಾಕ್ ನೀಡಿದ್ದು, ಸ್ಟಾಲಿನ್ ಅವರ ಅಳಿಯ ಸಬರಿಸನ್ ಮತ್ತು ಅವರ ಸ್ನೇಹಿತರ ಮನೆಗಳು ಸೇರಿದಂತೆ 8 ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ,
ತಮಿಳುನಾಡು ಶಾಸಕಾಂಗ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ, ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ ತನಿಖೆ ನಡೆಸುತ್ತಿದೆ. ಆದಾಯ ತೆರಿಗೆ ಇಲಾಖೆ ಮೂಲಗಳ ಪ್ರಕಾರ 25 ಕೋಟಿ ರೂಪಾಯಿಗಳ ಹವಾಲಾ ಹಣ ರವಾನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ನೀಲಂಕರೈನಲ್ಲಿರುವ ಡಿಎಂಕೆ ಪುತ್ರಿ ಸೆಂಥಮರೈ ಮತ್ತು ಅವರ ಪತಿ ಸಬರೀಸನ್ ಅವರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ. ಅಲ್ಲದೆ ಸಬರೀಸನ್ ಅವರ ಸಂಬಂಧಿಕರು ಮತ್ತು ಸ್ನೇಹಿತರ ಮನೆಗಳ ಮೇಲೂ ದಾಳಿ ಮಾಡಲಾಗಿದೆ. ಡಿಎಂಕೆ ಐಟಿ ವಿಭಾಗದ ಉಪ ರಾಜ್ಯ ಕಾರ್ಯದರ್ಶಿ ಕಾರ್ತಿಕ್ ಮೋಹನ್ ಮತ್ತು ಅಣ್ಣಾ ನಗರ ಡಿಎಂಕೆ ಅಭ್ಯರ್ಥಿ ಮೋಹನ್ ಅವರ ಪುತ್ರ ಮತ್ತು ಜಿ. ಜಿ ಸ್ಕ್ವೇರ್ ಮಾಲೀಕ ಸ್ಕ್ವೇರ್ ಬಾಲಾ ಅವರ ಮನೆಗಳ ಮೇಲೂ ದಾಳಿ ನಡೆದಿದೆ.
ಆಡಳಿತ ಪಕ್ಷದ ಮುಖಂಡರ ಮನೆಗಳ ಮೇಲೆ ದಾಳಿ ಏಕಿಲ್ಲ: ಆಯೋಗಕ್ಕೆ ಡಿಎಂಕೆ ದೂರು
ಇನ್ನು ಐಟಿ ದಾಳಿಯನ್ನು ರಾಜಕೀಯ ಪ್ರೇರಿತ ಎಂದು ಖಂಡಿಸಿರುವ ಡಿಎಂಕೆ, ಆಡಳಿತ ಪಕ್ಷದ ಮುಖಂಡರ ಮನೆಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿಲ್ಲ ಎಂದು ಪ್ರಶ್ನೆ ಮಾಡಿವೆ. ಅಲ್ಲದೆ ಐಟಿ ಅಧಿಕಾರಿಗಳ ದಾಳಿ ಮೂಲಭೂತ ಹಕ್ಕುಗಳ ಅತಿಕ್ರಮಣ. ಇದು ರಾಜಕೀಯ ಸೇಡಿನ ನಡೆ ಎಂದು ಆರೋಪಿಸಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಇತ್ತೀಚೆಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಡಿಎಂಕೆ ಪಕ್ಷದ ಖಜಾಂಚಿ ಮಣಿಮಾ ಅವರ ಮನೆ ಮತ್ತು ಕಚೇರಿ ಮತ್ತು ತಿರುವಣ್ಣಾಮಲೈ ಡಿಎಂಕೆ ಅಭ್ಯರ್ಥಿ ಮತ್ತು ಮಾಜಿ ಸಚಿವ ಇ.ವಿ.ವೇಲು ಅವರ ಮನೆ ಮೇಲೂ ದಾಳಿ ನಡೆಸಿತ್ತು.