ನವದೆಹಲಿ: ದೇಶದ ಮಾಜಿ ಪ್ರಧಾನಿ ಹಾಗೂ ಕಾಂಗ್ರೆಸ್ ನ ಹಿರಿಯ ಮುಖಂಡ ಡಾ.ಮನಮೋಹನ್ ಸಿಂಗ್ ಅವರಿಗೆ ಕೊರೋನ ದೃಢಪಟ್ಟಿದ್ದು, ದಿಲ್ಲಿಯ ಏಮ್ಸ್ ಆಸ್ಪತ್ರೆಗೆ ಸೋಮವಾರ ದಾಖಲಾಗಿದ್ದಾರೆ ಎಂದು ಸುದ್ದಿಸಂಸ್ಥೆ ಎಎನ್ ಐ ವರದಿ ಮಾಡಿದೆ.
ಜ್ವರ ಕಾಣಿಸಿಕೊಂಡ ಬಳಿಕ ಡಾ.ಸಿಂಗ್ ಅವರು ಕೊರೊನ ಪರೀಕ್ಷೆ ಮಾಡಿಸಿಕೊಂಡಿದ್ದರು. ಸಂಜೆ 5 ಗಂಟೆಯ ಸುಮಾರಿಗೆ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಡಾ. ಸಿಂಗ್ ಅವರು ದೇಶದ ಕೊರೋನ ವೈರಸ್ ಪರಿಸ್ಥಿತಿ ಕುರಿತು ಚರ್ಚಿಸಲು ಕಾಂಗ್ರೆಸ್ ನ ಪ್ರಮುಖ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಶನಿವಾರ ನಡೆದಿದ್ದ ಸಭೆಯಲ್ಲಿ ಭಾಗವಹಿಸಿದ್ದರು.
ಮನಮೋಹನ್ ಸಿಂಗ್ ಅವರು ರವಿವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎರಡು ಪುಟಗಳ ಪತ್ರ ಬರೆದಿದ್ದು, ಭಾರತದ ಎರಡನೇ ಹಾಗೂ ಹೆಚ್ಚು ತೀವ್ರವಾದ ಕೋವಿಡ್ -19 ಅಲೆಯನ್ನು ಎದುರಿಸುವ ಕುರಿತಾಗಿ ಐದು ಸಲಹೆಗಳನ್ನು ನೀಡಿದ್ದರು.
ಡಾ. ಸಿಂಗ್ ಅವರು ಕೋವಾಕ್ಸಿನ್ ನ ಎರಡೂ ಡೋಸ್ ಗಳನ್ನು ಸ್ವೀಕರಿಸಿದ್ದಾರೆ. ಮೊದಲನೆಯದು ಮಾರ್ಚ್ 4 ರಂದು ಹಾಗೂ ಎಪ್ರಿಲ್ 3 ರಂದು ಎರಡನೇ ಡೋಸ್ ಸ್ವೀಕರಿಸಿದ್ದರು.
ಮಾಜಿ ಪ್ರಧಾನ ಮಂತ್ರಿ ಅವರ ಆರೋಗ್ಯ ಉತ್ತಮಗೊಂಡು ಶೀಘ್ರ ಚೇತರಿಕೆಯಾಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ರಾಜಕಾರಣಿಗಳು ಶುಭ ಹಾರೈಸಿದ್ದಾರೆ.