ಪೆರ್ಲ: ದೇಶದ ಪರಮೋಚ್ಛ ತನಿಖಾ ಸಂಸ್ಥೆ ಸಿ.ಬಿ.ಐ ನವದೆಹಲಿಯ ಕೇಂದ್ರ ಕಚೇರಿಯ ನಿರ್ದೇಶಕರು ಕೊಡಮಾಡುವ 2020ನೇ ಸಾಲಿನ ಅತ್ಯುತ್ತಮ ಪಬ್ಲಿಕ್ ಪ್ರೋಸಿಕ್ಯೂಟರ್ ಪ್ರಶಸ್ತಿಗೆ ಸಿಬಿಐನ ಬೆಂಗಳೂರು ಕಚೇರಿಯಲ್ಲಿ ಸೇವೆಸಲ್ಲಿಸುತ್ತಿರುವ ಶಿವಾನಂದ ಪೆರ್ಲ ಆಯ್ಕೆಯಾಗಿದ್ದಾರೆ. ಪ್ರಶಸ್ತಿಪ್ರದಾನ ಸಮಾರಂಭ ಏಪ್ರಿಲ್ ತಿಂಗಳಲ್ಲಿ ನಡೆಯಲಿದೆ.
ಸಿಬಿಐ ಸಂಸ್ಥೆಗೆ ಇವರು ನೀಡಿರುವ ಗಣನೀಯ ಸೇವೆ ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಹಿಂದೆ ಸಿಬಿಐ ಚೆನ್ನೈ ಘಟಕದ ಸ್ಪೆಷ್ಯಲ್ ಕ್ರೈಂ ಬ್ರಾಂಚ್‍ನಲ್ಲಿ ಸೇವೆ ಸಲ್ಲಿಸುತ್ತಿರುವ ಮಧ್ಯೆ ಕೆಲವೊಂದು ಗಂಭೀರ ಭ್ರಷ್ಟಾಚಾರ ಪ್ರಕರಣಗಳ ತನಿಖೆ ನಡೆಸಿ ಭ್ರಷ್ಟ ಸರ್ಕಾರಿ ಅಧಿಕಾರಿಗಳಿಗೆ ಕಠಿಣ ಶೀಕ್ಷೆ ವಿಧಿಸುವಲ್ಲಿ ಯಶಸ್ವಿಯಾಗಿದ್ದರು. 2010ರಲ್ಲಿ ಬೆಂಗಳೂರನ್ನು ತಲ್ಲಣಗೊಳಿಸಿದ ಅಸ್ಸಾಂ ಮೂಲದ 24ರ ಹರೆಯದ ಯುವತಿ ಪಾಯಲಾ ಸುರೇಖಾ ಅವರನ್ನು ಹಾಡಹಗಲು ಕೊಲೆಗೈದ ಪ್ರಕರಣದಲ್ಲಿ ಸಿಬಿಐ ಪರವಾಗಿ ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ವಾದ ಮಂಡಿಸುವ ಮೂಲಕ ಆರೋಪಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸುವಂತೆ ಮಾಡಿದ್ದರು. ಸಿಬಿಐ ತನಿಖೆ ನಡೆಸಿದ ಹಲವಾರು ಪ್ರಕರಣಗಳಲ್ಲಿ ಇವರು ವಾದ ಮಂಡಿಸಿ ಹಾಗೂ ಕಾನೂನು ಸಲಹೆ ನೀಡಿರುವ ವಿಶೇಷ ಸೇವೆಯನ್ನೂ ಪ್ರಶಸ್ತಿಗೆ ಆಯ್ಕೆ ಮಾಡುವ ಸಂದರ್ಭ ಪರಿಗಣಿಸಲಾಗಿದೆ. ಪ್ರಸಕ್ತ ಇವರು ಸಿಬಿಐ ಬೆಂಗಳೂರು ಕಚೇರಿಯ ಭ್ರಷ್ಟಾಚಾರ ನಿಗ್ರಹ ವಿಭಾಗದಲ್ಲಿ ಪಬ್ಲಿಕ್ ಪ್ರೋಸಿಕ್ಯೂಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಬಜಕೂಡ್ಲು ಶ್ರೀಮತಿ ಪದ್ಮಾವತೀ-ದಿ. ರಾಮಣ್ಣ ಮಾಸ್ಟರ್ ದಂಪತಿ ಪುತ್ರ.