ಸೂರತ್: ಕೋವಿಡ್-19 ಎರಡನೇ ಅಲೆ ಮೊದಲ ಬಾರಿಗಿಂತ ಭೀಕರವಾಗಿದ್ದು, ಶವಸಂಸ್ಕಾರಗಳು ಬಿಡುವಿಲ್ಲದಂತೆ ನಡೆಯುವ ಮಟ್ಟಿಗೆ ಸಾವನ್ನಪ್ಪುತ್ತಿರುವವರ ಸಂಖ್ಯೆ ಏರಿಕೆಯಾಗತೊಡಗಿದೆ.
ದೇಶದ ಹಲವು ಭಾಗಗಳಲ್ಲಿ ಆಸ್ಪತ್ರೆಯಲ್ಲಿ ಬೆಡ್ ಸಿಗದೇ ಚಿಕಿತ್ಸೆಗೆ ಪರದಾಡುತ್ತಿರುವ ರೋಗಿಗಳು ಒಂದೆಡೆಯಾದರೆ ಮತ್ತೊಂದೆಡೆ ದಿನವಿಡಿ ಬಿಡುವಿಲ್ಲದ ಶವಸಂಸ್ಕಾರದ ಪರಿಣಾಮವಾಗಿ ಸ್ಮಶಾನದಲ್ಲಿ ಬಳಕೆಯಾಗುವ ಲೋಹದ ಕಟ್ಟುಗಳು ಬಿಸಿಗೆ ಕರಗುತ್ತಿರುವ ಘಟನೆ ಸೂರತ್ ನಲ್ಲಿ ವರದಿಯಾಗಿದೆ.
ಗುಜರಾತ್ ನ ಕುರುಕ್ಷೇತ್ರ ಸ್ಮಶಾನದಲ್ಲಿ ಕಳೆದ ಒಂದು ವಾರದಿಂದ 16 ಗ್ಯಾಸ್ ಆಧಾರಿತ ಫರ್ನೆಸ್ ಗಳು ಶವ ಸಂಸ್ಕಾರಕ್ಕಾಗಿ 24X7 ಕಾರ್ಯನಿರ್ವಹಿಸುತ್ತಿದ್ದು ನಿರ್ವಹಣೆಯ ಸಮಸ್ಯೆ ಎದುರಾಗಿದೆ ಎಂದು ಅಲ್ಲಿನ ಸಿಬ್ಬಂದಿಗಳು ತಿಳಿಸಿದ್ದಾರೆ.
ಶವಸಂಸ್ಕಾರದ ವೇಳೆ ಪಾರ್ಥಿವ ಶರೀರವನ್ನು ಇಡಲು ಬಳಕೆ ಮಾಡಲಾಗುವ ಗ್ಯಾಸ್ ಫರ್ನೆಸ್ ನ ಮೆಟಲ್ ಚೌಕಟ್ಟುಗಳು ಬಿಸಿಯ ತೀವ್ರತೆಗೆ ಕರಗಲು ಪ್ರಾರಂಭಿಸಿವೆ. ಸೂರತ್ ನಲ್ಲಿ ಪ್ರತಿ ದಿನ 18-19 ಕೋವಿಡ್-19 ಸಾವುಗಳು ವರದಿಯಾಗುತ್ತಿವೆ.