ನವದೆಹಲಿ: ಆರೋಗ್ಯ ವಲಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಕೊರೋನಾ ಲಸಿಕೆ ಹಾಕಿಸಿಕೊಳ್ಳಲು ಹೊಸ ದಾಖಲಾತಿಯನ್ನು ಆರಂಭಿಸದಂತೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಆದೇಶ ಹೊರಡಿಸಿದೆ.
ಕೆಲವು ಆರೋಗ್ಯ ವಲಯ ಮತ್ತು ಮುಂಚೂಣಿ ವಲಯಗಳಲ್ಲಿ ಕೆಲಸ ಮಾಡುವವರು ಅನರ್ಹ ಫಲಾನುಭವಿಗಳಾಗಿದ್ದು ನಿಯಮ ಉಲ್ಲಂಘಿಸಿ ಕೋವಿಡ್-19 ಲಸಿಕೆ ಹಾಕಿಸಿಕೊಳ್ಳಲು ನೋಂದಣಿ ಮಾಡಿಸಿಕೊಳ್ಳುತ್ತಾರೆ ಎಂದು ಕಂಡುಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಆದೇಶ ಹೊರಡಿಸಿದೆ.
ಈ ಬಗ್ಗೆ ಪತ್ರ ಹೊರಡಿಸಿರುವ ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್, 45 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ಕೋವಿನ್ ಪೋರ್ಟಲ್ ನಲ್ಲಿ ನೋಂದಣಿ ಮಾಡಿಸಿಕೊಳ್ಳಿ. ಆರೋಗ್ಯ ವಲಯ ಮತ್ತು ಕೋವಿಡ್ ಮುಂಚೂಣಿ ವಲಯದಲ್ಲಿ ಕೆಲಸ ಮಾಡುವ ಎಲ್ಲರಿಗೂ ಈಗಾಗಲೇ ಲಸಿಕೆ ಹಾಕಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ ಎಂದು ಸೂಚನೆ ನೀಡಿದ್ದಾರೆ.
ಈ ವರ್ಷ ಜನವರಿ 16ರಂದು ದೇಶಾದ್ಯಂತ ಕೊರೋನಾ ವಿರುದ್ಧ ಲಸಿಕೆ ಅಭಿಯಾನ ಆರಂಭಗೊಂಡಿತ್ತು. ಆರಂಭದಲ್ಲಿ ಆರೋಗ್ಯ ಸೇವೆ ವಲಯದಲ್ಲಿ ಕೆಲಸ ಮಾಡುವವರಿಗೆ ನೀಡಲಾಗಿತ್ತು. ನಂತರ ಫೆಬ್ರವರಿ 2ರಂದು ಕೋವಿಡ್ ಮುಂಚೂಣಿ ವಲಯದಲ್ಲಿ ಕೆಲಸ ಮಾಡುವ ಕಾರ್ಯಕರ್ತರಿಗೆ ಕೊರೋನಾ ಲಸಿಕೆ ನೀಡಲಾಗಿತ್ತು.
ಮುಂದಿನ ಹಂತದ ಕೊರೋನಾ ಲಸಿಕೆ ನೀಡುವ ಅಭಿಯಾನ ಮಾರ್ಚ್ 1ರಂದು ಆರಂಭವಾಗಿ 60 ವರ್ಷಕ್ಕೆ ಮೇಲ್ಪಟ್ಟ ಮತ್ತು ಯಾವುದಾದರೂ ಆರೋಗ್ಯ ಸಮಸ್ಯೆ ಇರುವ 45 ವರ್ಷಕ್ಕೆ ಮೇಲ್ಪಟ್ಟ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕೆಂದು ಕೇಂದ್ರ ಸರ್ಕಾರ ಕಡ್ಡಾಯ ಮಾಡಿತು.