ಮಂಜೇಶ್ವರ : ಕೇರಳ ಸಾರಿಗೆ ಬಸ್ಸೊಂದು ಬೈಕಿಗೆ ಡಿಕ್ಕಿ ಹೊಡೆದು ಸಂಭವಿಸಿಸಿದ ಅಪಘಾತದಲ್ಲಿ ಬೈಕ್ ಸವಾರ ಬಸ್ಸಿನ ಚಕ್ರದಡಿಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ್ದಾನೆ. ಭಾನುವಾರ ರಾತ್ರಿ 9 ಗಂಟೆಯ ಸುಮಾರಿಗೆ ಹೊಸಂಗಡಿ ರಾ. ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.
ಪೈವಳಿಕೆ ಬೀಡುಬೈಲು ನಿವಾಸಿ ಗುರುವ ಎಂಬವರ ಪುತ್ರ ಶಶಿಧರ (26) ಸಾವನ್ನಪ್ಪಿದ ದುರ್ದೈವಿ. ಮಂಗಳೂರು ಭಾಗದಿಂದ ಅಮಿತ ವೇಗದಲ್ಲಿ ಯಮಧೂತನಂತೆ ಆಗಮಿಸಿದ ಕೇರಳ ಸಾರಿಗೆ ಬಸ್ಸು ಶಶಿಧರ ಸಂಚರಿಸುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಶಶಿಧರ ಬಸ್ಸಿನ ಚಕ್ರದಡಿಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಮಂಜೇಶ್ವರ ಪೋಲೀಸರು ಸ್ಥಳಕ್ಕಾಗಮಿಸಿ ಬಸ್ಸನ್ನು ಹಾಗೂ ಚಾಲಕನನ್ನು ವಶಕ್ಕೆ ತೆಗೆದಿದ್ದಾರೆ.