ನವದೆಹಲಿ: ಕೇಂದ್ರ ಸರ್ಕಾರ ವಿದೇಶಿ ಕೋವಿಡ್ ಲಸಿಕೆಗಳ ಮೇಲಿನ ಆಮದು ಸುಂಕ ರದ್ದು ಮಾಡುವ ಕುರಿತು ಆಲೋಚನೆಯಲ್ಲಿ ತೊಡಗಿರುವ ಬೆನ್ನಲ್ಲೇ ಇತ್ತ ಅಮೆರಿಕ ಮೂಲದ ಔಷಧ ತಯಾರಿಕಾ ಸಂಸ್ಥೆ ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆ ತನ್ನ ಕೋವಿಡ್ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ಹಾಗೂ ಆಮದು ಮಾಡಿಕೊಂಡು ಬಳಸುವ ಕುರಿತಂತೆ ಅನುಮತಿ ಕೋರಿ ಔಷಧ ನಿಯಂತ್ರಣ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದೆ.
ಈ ಬಗ್ಗೆ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದ್ದು, 'ದೇಶದಲ್ಲಿ ಜಾನ್ಸನ್ ಆಯಂಡ್ ಜಾನ್ಸನ್ ಸಿಂಗಲ್ ಡೋಸ್ ಲಸಿಕೆ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ಮತ್ತು ಆಮದು ಮಾಡಿಕೊಂಡು ಬಳಸುವ ಕುರಿತಂತೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದೆ ಎಂದು ಹೇಳಲಾಗಿದೆ. ಜಾನ್ಸನ್ ಆಯಂಡ್ ಜಾನ್ಸನ್ ಏಪ್ರಿಲ್ 12ರಂದೇ ಸುಗಮ್ ಆನ್‌ಲೈನ್ ಪೋರ್ಟಲ್ ಮೂಲಕ ಲಸಿಕೆ ಬಳಕೆಗೆ ಅನುಮತಿ ಕೋರಿತ್ತು. ಆದರೆ ಕೆಲವೊಂದು ತಾಂತ್ರಿಕ ಅಡಚಣೆಗಳಿಂದಾಗಿ ಸೋಮವಾರ ಮತ್ತೆ ಅರ್ಜಿ ಸಲ್ಲಿಸಿದೆ ಎಂದು ಹೇಳಿದೆ.
ಅಂತೆಯೇ ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆ ಅರ್ಜಿ ಕುರಿತಂತೆ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಒ) ತಜ್ಞರ ಸಮಿತಿ ಸಭೆ ಸೇರಿ ಅರ್ಜಿ ಕುರಿತು ನಿರ್ಧಾರ ಕೈಗೊಳ್ಳಲಿದೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ, ಅಮೆರಿಕ, ಯುರೋಪ್, ಬ್ರಿಟನ್ ಮತ್ತು ಜಪಾನ್‌ನಲ್ಲಿ ಕೋವಿಡ್ 19 ನಿಯಂತ್ರಣಕ್ಕೆ ವಿದೇಶಿ ಲಸಿಕೆ ಬಳಕೆಗೆ ಅನುಮತಿ ನೀಡಿದ ಬೆನ್ನಲ್ಲೇ, ಭಾರತ ಸರ್ಕಾರ ಕೂಡ ಲಸಿಕೆ ಕಾರ್ಯಕ್ರಮಕ್ಕೆ ವೇಗ ನೀಡಲು ನಿರ್ಧರಿಸಿದ್ದು, ಲಸಿಕೆ ತುರ್ತು ಬಳಕೆಗೆ ಅನುಮತಿ ನೀಡಲು ಮುಂದಾಗಿದೆ. ನ್ಯೂ ಡ್ರಗ್ಸ್ ಆಯಂಡ್ ಕ್ಲಿನಿಕಲ್ ಟ್ರಯಲ್ ರೂಲ್ಸ್ 2019ರ ಅನ್ವಯ ವಿಶೇಷ ಸಂದರ್ಭದಲ್ಲಿ ಲಸಿಕೆ ಮತ್ತು ಇತರ ಔಷಧಗಳ ತುರ್ತು ಬಳಕೆಗೆ ಸೂಕ್ತ ಅನುಮತಿಯನ್ನು ತ್ವರಿತವಾಗಿ ನೀಡಬಹುದಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.