ಮಂಗಳೂರು: ಸಾಲಗಾರರ ಕಾಟ ತಡೆಯಲಾರದೆ ಲಾಟರಿಯಲ್ಲಿ ಒಂದು ಕೋಟಿ ರೂ. ಗೆದ್ದ ಸುಳ್ಳಿನ ಕಥೆ ಕಟ್ಟಿ ಸೆಕ್ಯೂರಿಟಿ ಗಾರ್ಡ್ ಪರಾರಿಯಾದ ಸ್ವಾರಸ್ಯಕರ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಗುರುವಾರ ಮಂಗಳೂರು ನಗರ ಹೊರವಲಯದ ತೊಕ್ಕೊಟ್ಟು ಜಂಕ್ಷನ್ನಿನ ಕಟ್ಟಡದಲ್ಲಿ ಮೂರು ವರ್ಷಗಳಿಂದ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ ಕೇರಳದ ಕ್ಯಾಲಿಕಟ್ ನಿವಾಸಿ ಮೊಯಿದ್ದೀನ್ ಕುಟ್ಟಿ, ಗುರುವಾರ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದ್ದರು.
ಸೆಕ್ಯೂರಿಟಿ ಗಾರ್ಡ್ ಕೇರಳದ ಲಾಟರಿಯಲ್ಲಿ ಒಂದು ಕೋಟಿ ಬಂಪರ್ ಹಣ ಗಳಿಸಿದ್ದಾರೆ ಅನ್ನುವ ವಿಚಾರ ಸಾಕಷ್ಟು ವೈರಲ್ ಆಗಿತ್ತು. ಕೆಲ ಪತ್ರಿಕೆಗಳು, ಸುದ್ದಿ ವೆಬ್‌ಸೈಟ್‌ಗಳು ಈ ವೈರಲ್ ಸುದ್ದಿಯನ್ನೇ ಯಥಾವತ್ತಾಗಿ ಪ್ರಕಟಿಸಿದ್ದವು.
500 ರೂ. ಸಾಲ ಮಾಡಿ ಲಾಟರಿ ಪಡೆದವನಿಗೆ ಒಲಿದ ಕೋಟಿ ರೂಪಾಯಿ ಅಂತಾ ಸಖತ್ ಪ್ರಚಾರ ಪಡೆದರು. ಇದಕ್ಕೆ ಪುಷ್ಠಿ ನೀಡುವಂತೆ ಮೊಯಿದ್ದೀನ್ ಕುಟ್ಟಿ ಲಾಟರಿ ಹಿಡಿರುವ ಫೋಟೋ, ಲಾಟರಿ ನಂಬರ್ ಎಲ್ಲವೂ ವೈರಲ್ ಆಗಿತ್ತು.
ಆದರೆ ಸತ್ಯ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಇವೆಲ್ಲವೂ ಮೊಯಿದ್ದೀನ್ ಕುಟ್ಟಿ ಆಡಿರುವ ನಾಟಕ ಅಂತಾ ಗೊತ್ತಾಗಿದೆ. ಸಾಲಗಾರರ ಕಾಟ ತಡೆಯಲಾರದೆ ಒಂದು ಕೋಟಿ ಲಾಟರಿ ಹೊಡೆದಿರುವ ಬಗ್ಗೆ ಸ್ವತಃ ಮೊಯಿದ್ದೀನ್ ಪ್ರಚಾರ ಮಾಡಿದ್ದರು. ಇದಕ್ಕೆ ಪುಷ್ಠಿಯಾಗಿ ಸೈಬರ್‌ನಲ್ಲಿ ಫೇಕ್ ಲಾಟರಿ, ನಂಬರ್ ತಯಾರಿ ಮಾಡಿಕೊಂಡಿದ್ದಾರೆ. ಸಾಲಗಾರರಿಗೆ ಲಾಟರಿ ಹೊಡೆದಿರುವ ಫೋಟೋ ಕಳುಹಿಸಿ ಸಾಲವೆಲ್ಲಾ ಮರುಪಾವತಿ ಮಾಡುವುದಾಗಿ ಹೇಳಿದ್ದಾರೆ.
ಲಾಟರಿ ಖರೀದಿಸುವ ಹವ್ಯಾಸ ಹೊಂದಿರುವ ಮೊಯಿದ್ದೀನ್ ಲಾಟರಿ ಒಲಿದಿರಬಹುದೆಂದು ಎಲ್ಲರೂ ನಂಬಿದ್ದಾರೆ. ಆದರೆ ಸೆಕ್ಯೂರಿಟಿ ಗಾರ್ಡ್ ನೋರ್ವನಿಗೆ ಕೋಟಿ ಒಲಿದಿರುವ ವಿಚಾರ ಕಾಡ್ಗಿಚ್ಚಿನಂತೆ ಹಬ್ಬುತ್ತಿಂದತೆಯೇ ಮೊಯಿದ್ದೀನ್ ಪರಾರಿಯಾಗಿದ್ದಾರೆ.
ಮತ್ತೆ ವಿಚಾರಿಸಿದಾಗ ಆ ನಂಬರಿಗೆ ಲಾಟರಿಯೇ ಒಲಿದಿಲ್ಲ. ಇದೆಲ್ಲಾ ಸಾಲಗಾರರ ಕಾಟ ತಡೆಯಲು ಮಾಡಿರುವ ಖತರ್ನಾಕ್ ಉಪಾಯ ಅನ್ನೋದು ಗೊತ್ತಾಗಿದೆ. ಕ್ಷಣಕಾಲ ಹೀರೋ ಆದ ಸೆಕ್ಯೂರಿಟಿ ಗಾರ್ಡ್ ಕಟ್ಟಿರುವ ಕಟ್ಟು ಕಥೆಯ ವಿಚಾರ ಗೊತ್ತಾದ ಮೇಲೆ ಹೀಗೂ ಮಾಡಬಹುದಾ ಅಂತಾ ಜನ ಮಾತನಾಡಿಕೊಂಡಿದ್ದಾರೆ.