ನವದೆಹಲಿ : ಸತತ ಐದು ದಿನಗಳಿಂದ ಸರ್ಕಾರಿ ಸ್ವಾಮ್ಯದ ಮೂರು ಕಂಪನಿಗಳು ಇಂಧನ ದರವನ್ನು ಬದಲಾವಣೆ ಮಾಡಿಲ್ಲ. ಕಳೆದ ಗುರುವಾರದಂದು ದೆಹಲಿಯಲ್ಲಿ ಪೆಟ್ರೋಲ್ ಬೆಲೆಯಲ್ಲಿ ಲೀಟರಿಗೆ 16 ಪೈಸೆ ಇಳಿಕೆಯಾಗಿದ್ದು, ಡೀಸೆಲ್ ಬೆಲೆಯಲ್ಲಿ 14 ಪೈಸೆಯನ್ನು ತಗ್ಗಿಸಲಾಗಿತ್ತು.
ಈ ನಡುವೆ ಪ್ರಮುಖ ತೈಲ ಕಂಪನಿಗಳು ಆಸ್ಪತ್ರೆಗೆ ಮೆಡಿಕಲ್ ಆಕ್ಸಿಜನ್ ಪೂರೈಕೆ ಆರಂಭಿಸಿವೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್(ಬಿಪಿಸಿಎಲ್) ಆಮ್ಲಜನಕ ಸಿಲಿಂಡರ್ ಪೂರೈಕೆಯನ್ನು ಉಚಿತವಾಗಿ ನೀಡುತ್ತಿದೆ.
ಸುಮಾರು 100 ಮೆಟ್ರಿಕ್ ಟನ್ ಪ್ರತಿ ತಿಂಗಳಿನಂತೆ ಆಸ್ಪತ್ರೆಗಳಿಗೆ ಮೆಡಿಕಲ್ ಆಕ್ಸಿಜನ್ ಪೂರೈಸಲು ಬಿಪಿಸಿಎಲ್ ಮುಂದಾಗಿದ್ದು, ಸಂಪೂರ್ಣವಾಗಿ ಉಚಿತ ಸೇವೆ ಇದಾಗಿದೆ. ಕೊವಿಡ್ 19 ಎರಡನೇ ಅಲೆಯಿಂದಾಗಿ ಆಮ್ಲಜನಕ ಕೊರತೆ ಅನುಭವಿಸುತ್ತಿರುವವರಿಗೆ ಅಗತ್ಯ ಪೂರೈಕೆ ಒದಗಿಸಲು ಸಂಸ್ಥೆ ಮುಂದಾಗಿದೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕೂಡಾ ತನ್ನ ತೈಲ ಘಟಕಗಳಲ್ಲಿ ಶೇಖರಿಸಿರುವ ಆಮ್ಲಜನಕ ಪೂರೈಕೆಯನ್ನು ಮಾಡಲು ಮುಂದಾಗಿದೆ. ದೆಹಲಿಯ ವಿವಿಧ ಆಸ್ಪತ್ರೆಗಳಿಗೆ 150 ಮೆಟ್ರಿಕ್ ಟನ್ ಮೆಡಿಕಲ್ ಆಕ್ಸಿಜನ್ ಒದಗಿಸುತ್ತಿದೆ.
ದೆಹಲಿಯಲ್ಲಿ ಆಮ್ಲಜನಕ ಕೊರತೆ ಹೆಚ್ಚಾಗಿದ್ದು, ಇಂದು ಮಹಾ ದುರ್ಗಾ ದತ್ತಿ ಸಂಸ್ಥೆಯ ಆಸ್ಪತ್ರೆಗೆ ಮೊದಲ ಹಂತದ ಆಕ್ಸಿಜನ್ ಪೂರೈಕೆ ಮಾಡಲಾಗಿದೆ ಎಂದು ಐಒಸಿ ವಕ್ತಾರರು ತಿಳಿಸಿದ್ದಾರೆ.
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 256,947 ಜನರಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ಪತ್ತೆಯಾಗಿದೆ. ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಒಟ್ಟಾರೆ ಸಂಖ್ಯೆಯು 15,586,512ಕ್ಕೇರಿದೆ. ದೇಶದಲ್ಲಿ ಮಹಾಮಾರಿಯಿಂದ ಪ್ರಾಣ ಬಿಟ್ಟವರ ಸಂಖ್ಯೆಯು 182,331ಕ್ಕೆ ಏರಿಕೆಯಾಗಿದೆ, 13,248,469ಮಂದಿ ಚೇತರಿಕೆ ಹೊಂದಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ ತಿಳಿಸಿದೆ.