ಕಾಸರಗೋಡು: ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿದ್ದ ಪೆÇ್ರ.ಎಂ.ಎ ಹೆಗಡೆ ಅವರ ನಿಧನಕ್ಕೆ ಶ್ರದ್ದಾಂಜಲಿ ನಿನ್ನೆ ಕಾಸರಗೋಡಿನ ಸಿರಿಚಂದನ ಯುವಬಳಗವು ಓನ್ಲೈನ್ ಮೂಲಕ ನಡೆಸಿತು.
ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರಾದ ಯೋಗೀಶ್ ರಾವ್ ಚಿಗುರುಪಾದೆಯವರು ಮಾತನಾಡಿ, "ಹೆಗಡೆಯವರಿಗೆ ಕಾಸರಗೋಡಿನ ಬಗ್ಗೆ ಪ್ರೀತಿಯಿತ್ತು. ಇಲ್ಲಿ ಅಕಾಡೆಮಿ ವತಿಯಿಂದ ಹಲವು ಕಾರ್ಯಕ್ರಮ ನಡೆಯುವಂತೆ ಮುಖ್ಯವಾಗಿ ಪಾರ್ತಿಸುಬ್ಬನ ಬಗ್ಗೆ ವಿಶೇಷ ವಿಚಾರಗೋಷ್ಟಿ ನಡೆಸಲು ಅವರು ವಹಿಸಿದ ಮುತುವರ್ಜಿ ಸ್ಮರಣೀಯವಾದುದು. ವಿದ್ವಾಂಸರಾದ ಅವರು ಅಕಾಡೆಮಿಯ ಅಧ್ಯಕ್ಷರಾಗಿದ್ದು, ಅವರಿಗೆ ಸಿಗುವ ಗೌರವಧನವನ್ನೂ ಅಶಕ್ತ ಕಲಾವಿದರಿಗಾಗಿ ಮೀಸಲಿಟ್ಟ ಅವರ ಮಾನವೀಯತೆ ಎದ್ದು ಕಾಣುವಂತದ್ದು. ಅವರ ನೇರನಿಷ್ಠುರ ಮಾತುಗಳಿಂದ ಒಂದಷ್ಟು ಒಳಿತುಗಳಾಗಿವೆ. ಅವರ ಅಕಾಲ ಮರಣ ಯಕ್ಷಗಾನಕ್ಕೆ ಮಾತ್ರವಲ್ಲ ನಾಡಿಗಾದ ನಷ್ಟ." ಎಂದರು.
ಅಕಾಡೆಮಿ ಸದಸ್ಯ ದಾಮೋದರ ಶೆಟ್ಟಿ ಮಾತನಾಡಿ, "ಹೆಗಡೆಯವರಂತವರ ಉತ್ತಮ ನಾಯಕರನ್ನು ಕಾಣಲು ಅಸಾಧ್ಯ. ಎರಡನೆಯ ಅವರ ಅವಧಿಯು ಅಕಾಡೆಮಿಯ ಹೆಸರನ್ನು ಉಚ್ಛ್ರಾಯ ಮಟ್ಟಕ್ಕೆ ಕೊಂಡೊಯ್ಯಿತು. ಕಾಸರಗೋಡಿನ ಕಲಾವಿದರ ಬಗ್ಗೆ ಅವರು ತೋರಿದ ಪ್ರೀತಿ ದೊಡ್ಡದು." ಎಂದರು.
ಅಧ್ಯಕ್ಷತೆ ವಹಿಸಿದ ಸಿರಿಚಂದನ ಬಳಗದ ಮಾರ್ಗದರ್ಶಕ, ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ಮಾತನಾಡಿ, "ವ್ಯಕ್ತಿಯೊಬ್ಬನಿಗೆ ಸ್ಥಾನಮಾನ, ಅಧಿಕಾರ ಸಿಗುವುದು ದೊಡ್ಡ ವಿಷಯವಲ್ಲ, ಅದನ್ನು ಆತ ಹೇಗೆ ನಿಭಾಯಿಸಿದ ಎಂಬುದು ಮುಖ್ಯ. ವಿದ್ವಾಂಸರು, ಸಾಹಿತಿಗಳು, ಸಾಮಾನ್ಯವಾಗಿ ಆಡಳಿತಾತ್ಮಕ ಹುದ್ದೆಯಲ್ಲಿ ಇರುವಾಗ ಅವರು ತಳಮಟ್ಟದ ವ್ಯಕ್ತಿಗಳ ಬಗ್ಗೆ ಯೋಚಿಸುವುದು ವಿರಳ, ಅವರ ಬರವಣಿಗೆ ಮಾತು ಮತ್ತು ಕ್ರಿಯೆ ಪರಸ್ಪರ ಹೋಲಿಕೆಯಾಗದೆ ಇರುವ ಉದಾಹರಣೆಗಳೂ ಇವೆ. ಆದರೆ ಪೆÇ್ರ. ಹೆಗಡೆಯವರು ಇದಕ್ಕೆ ಅಪವಾದ. ಅಕಾಡೆಮಿಯ ಹೊಸ ನಡೆ ಹೊಸ ಚಿಂತನೆಗೆ ಮಾತ್ರವಲ್ಲ, ಕಲಾವಿದರ ಜತೆಗಿನ ಅವರ ಕಾಳಜಿ, ಮಾನವೀಯತೆಯು ಮುಂದಿನವರಿಗೆ ದೀಪಧಾರಿ. ಸರಕಾರದ ಕೊರೊನ ಸಂತ್ರಸ್ತ ನಿಧಿಗೆ ಅವರು ನೀಡಿದ ದೇಣಿಗೆ ಹಾಗೂ ಅಶಕ್ತ ಯಕ್ಷಗಾನ ಕಲಾವಿದರಿಗಾಗಿ ಅವರು ಅವರ ಗೌರವಧನವನ್ನು ಮೀಸಲಿಟ್ಟ ಪರಿ ಎಲ್ಲರಿಗೂ ಸ್ಪೂರ್ತಿಯಾಗಬೇಕು. ಹಿರಿಯರ ನೆನಪು, ಯಕ್ಷಗಾನ ಶಿಬಿರ ಈ ಮುಂತಾದ ವಿಷಯಗಳಲ್ಲಿ ಅವರು ಕಾಸರಗೋಡಿನ ಯುವವಿದ್ಯಾರ್ಥಿಗಳ ಮೇಲೆ ತೋರಿದ ಪ್ರೀತಿಯನ್ನು ಇಲ್ಲಿನವರು ಯಾವತ್ತೂ ಮರೆಯಲಾರರು, ಅವರ ವಿದ್ವತ್ತು, ಸಾಹಿತ್ಯಕ ನಡೆ ನುಡಿ ಹಾಗೂ ಅವರ ಮಾನವೀಯತೆ, ನೇರನಡೆನುಡಿ ಯುವಪೀಳಿಗೆಗೆ ದೀಪದಾರಿಯಾಗಲಿ. ಅವರು ಅಕಾಡೆಮಿ ಅಧ್ಯಕ್ಷರಾಗಿ ಮಾಡಿದ ಕಾರ್ಯಸಾಧನೆಗಳು ಪುಸ್ತಕ ರೂಪದಲ್ಲಿ ದಾಖಲೆಯಾಗಬೇಕು. ಕರ್ನಾಟಕ ಯಕ್ಷಗಾನ ಅಕಾಡೆಮಿಯು ಈ ಕಾರ್ಯವನನ್ನು ಮಾಡುವುದರ ಮೂಲಕ ಒಬ್ಬ ಸಮರ್ಥ ನಾಯಕನ ಸನ್ನಡತೆಯನ್ನು ಮುಂದಿನವರೂ ತಿಳಿಯುವಂತೆ ಮಾಡಬೇಕು." ಎಂದರು.
ಯಕ್ಷಗಾನ ಗುರುಗಳಾದ ದಿವಾಣ ಶಿವಶಂಕರ ಭಟ್ ಉಪಸ್ಥಿತರಿದ್ದರು. ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ. ಸುಧಾ ಕುಮಾರಿ ಕೆ ಅವರು, ಹೆಗಡೆಯವರ ನಿಧನದ ಕೆಲವು ದಿನ ಮೊದಲು ಅವರ ಜತೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ನೆನಪುಗಳನ್ನು ಸ್ಮರಿಸಿಕೊಂಡರು.
ಸಿರಿಚಂದನದ ಯಕ್ಷಗಾನ ಸಮಿತಿ ಸಂಚಾಲಕ, ಅಧ್ಯಾಪಕ ದಿವಾಕರ ಬಲ್ಲಾಳ್ ಅವರು ಹೆಗಡೆಯವರ ಕುರಿತು ಮಾತನಾಡಿದರು. ಸಿರಿಚಂದನ ಬಳಗದ ಕಾರ್ಯದರ್ಶಿ ಕುಮಾರಿ ಅನುರಾಧ ಕಲ್ಲಂಗೂಡ್ಲು ಸ್ವಾಗತಿಸಿದರು, ಅಧ್ಯಕ್ಷ ಕಾರ್ತಿಕ್ ಪಡ್ರೆ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ದಿವಾಕರ್ ಬಲ್ಲಾಳ್ ಎ.ಬಿ ವಂದಿಸಿದರು. ಕಾಸರಗೋಡಿನ ಯುವಮನಸ್ಸುಗಳು, ಕಾಲೇಜು ವಿದ್ಯಾರ್ಥಿಗಳು, ಮಂಗಳೂರು, ಸುಳ್ಯ ಈ ಮುಂತಾದ ಪ್ರದೇಶಗಳ ಯಕ್ಷಗಾನ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.