ತಿರುವನಂತಪುರ: ತುರ್ತು ಸಂದರ್ಭಗಳಲ್ಲಿ ರಕ್ತದ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಕೇರಳ ಪೋಲೀಸರು ತಮ್ಮ ಅಧಿಕೃತ ಮೊಬೈಲ್ ಆಪ್ ಪೋಲ್-ಆಪ್‍ನಲ್ಲಿ ಹೊಸ ವ್ಯವಸ್ಥೆಯನ್ನು ಪ್ರಾರಂಭಿಸಿದ್ದಾರೆ.
ರಕ್ತದಾನ ಮಾಡಲು ಆಸಕ್ತಿ ಇರುವವರು ಪೋಲ್-ಆಪ್ ಡೌನ್ ಲೋಡ್ ಮಾಡಿಕೊಂಡು ಅಗತ್ಯ ಮಾಹಿತಿ ನೀಡುವ ಮೂಲಕ ನೋಂದಾಯಿಸಿಕೊಳ್ಳಬಹುದು. ರಕ್ತದ ಅಗತ್ಯವಿರುವವರು ತಮ್ಮ ರಕ್ತದ ಗುಂಪು,ಯೂನಿಟ್, ಆಸ್ಪತ್ರೆ, ರಕ್ತ ಬ್ಯಾಂಕ್ ಮತ್ತು ದಿನಾಂಕವನ್ನು ಒದಗಿಸುವ ಮೂಲಕ ಪೋಲ್-ಬ್ಲಡ್ ನಲ್ಲಿ ನೋಂದಾಯಿಸಿಕೊಳ್ಳಬೇಕು.
ರಕ್ತದ ಅಗತ್ಯಕ್ಕಾಗಿ ನೋಂದಣಿ ಮಾಡುವವರನ್ನು ಪೋಲೀಸರು ಸಂಪರ್ಕಿಸಿ ರಕ್ತದ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುತ್ತಾರೆ. ಪೋಲ್-ಆಪ್ ರಕ್ತದಾನಿ ಮತ್ತು ಸ್ವೀಕರಿಸುವವರನ್ನು ಸಂಪರ್ಕಿಸುವ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಈ ವ್ಯವಸ್ಥೆಯನ್ನು ತಿರುವನಂತಪುರದ ಪೋಲೀಸ್ ಪ್ರಧಾನ ಕಚೇರಿಯಲ್ಲಿರುವ ಪೋಲ್-ಆಪ್ ನಿಯಂತ್ರಣ ಕೊಠಡಿ ನಿರ್ವಹಿಸುತ್ತದೆ. ರಾಜ್ಯ ಏಡ್ಸ್ ಕಂಟ್ರೋಲ್ ಸೊಸೈಟಿಯ ಸಹಯೋಗದೊಂದಿಗೆ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು.
ದೇಶದಲ್ಲಿ ಮೊದಲ ಬಾರಿಗೆ ಪೋಲೀಸ್ ಪಡೆ ರಕ್ತದಾನಕ್ಕಾಗಿ ಅಧಿಕೃತ ಮೊಬೈಲ್ ಆಪ್ ನ್ನು ಬಿಡುಗಡೆ ಮಾಡಿದೆ. ಸಾರ್ವಜನಿಕ ಸೇವಾ ತತ್ಪರತೆ ಎಂಬ ಪೋಲೀಸರ ಹೊಸ ವ್ಯವಸ್ಥೆಯು ಸಾರ್ವಜನಿಕ ಕಾಳಜಿಯಿಂದ ಈ ನೂತನ ಕಲ್ಪನೆಯ ಮೂಲಕ ಸಾಕಾರಗೊಳಿಸಲಾಗುತ್ತದೆ.
ಈ ವರ್ಷ ಜೂನ್ 10 ರಂದು ಪ್ರಾರಂಭವಾದ ಪೋಲ್-ಆಪ್ ದೇಶದ ಅತ್ಯಂತ ಜನಪ್ರಿಯ ಪೋಲೀಸ್ ಅಪ್ಲಿಕೇಶನ್ ಆಗಿದೆ. ಆಂಡ್ರಾಯ್ಡ್ ಮತ್ತು ಐಒಎಸ್ ಪ್ಲಾಟ್‍ಫಾರ್ಮ್‍ಗಳಿಂದ ಪೆÇೀಲ್-ಅಪ್ಲಿಕೇಶನ್ ನ್ನು ಡೌನ್‍ಲೋಡ್ ಮಾಡಬಹುದು. ಈ ಆಪ್ ಮೂಲಕ 27 ಕ್ಕೂ ಹೆಚ್ಚು ಪೋಲೀಸ್ ಸೇವೆಗಳು ಲಭ್ಯವಿದೆ. ಪ್ರಸ್ತುತ, ಪೋಲ್ ಅಪ್ಲಿಕೇಶನ್ ಸುಮಾರು ಮೂರು ಲಕ್ಷ ಬಳಕೆದಾರರನ್ನು ಹೊಂದಿದೆ.