ಮುಂಬೈ: ಕೋವಿಡ್-19 ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ರಾತ್ರಿ ವೇಳೆಯಲ್ಲಿ ಕರ್ಫ್ಯೂ ಮತ್ತು ವಾರಂತ್ಯದಲ್ಲಿ ಲಾಕ್‌ಡೌನ್ ಅನ್ನು ಘೋಷಣೆ ಮಾಡಲಾಗಿದೆ.
ಮಹಾರಾಷ್ಟ್ರದಲ್ಲಿ ಎರಡನೇ ಹಂತದ ಕೊರೊನಾ ವೈರಸ್ ಅಲೆಯೆದ್ದಿದೆ. ಈ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳಲು ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ.
ಸಂಪುಟ ಸಭೆಯ ಬಳಿಕ ಪ್ರತಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಜವಳಿ, ಬಂದರು ಹಾಗೂ ಮೀನುಗಾರಿಕೆ ಸಚಿವ ಅಸ್ಲಾಂ ಶೇಖ್, ರಾತ್ರಿ 8ರಿಂದ 7ರ ವರೆಗೂ ರಾತ್ರಿ ಕರ್ಫ್ಯೂ ಹೇರಲು ನಿರ್ಧರಿಸಿರುವುದಾಗಿ ತಿಳಿಸಿದರು.
ಕೋವಿಡ್ ಸೋಂಕು ಹರಡುವುದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ, ಅಗತ್ಯ ಸೇವೆಗಳು, ವಸ್ತುಗಳ ಪೂರೈಕೆಗೆ ಅಡಚಣೆ ಇರುವುದಿಲ್ಲ.
ನೂತನ ಮಾರ್ಗಸೂಚಿಯು ಸೋಮವಾರ ರಾತ್ರಿ 8 ಗಂಟೆಯಿಂದ ಜಾರಿಗೆ ಬರಲಿದೆ. ಲೋಕಲ್ ರೈಲುಗಳು ಸೇರಿದಂತೆ ಮುಂಬೈ ಸಾರಿಗೆಯು ಎಂದಿನಂತೆ ಕಾರ್ಯಾಚರಿಸಲಿದೆ. ಅದೇ ರೀತಿ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮುಂದುವರಿಸುವಂತೆ ಸೂಚಿಸಲಾಗಿದೆ.
ವಾರಂತ್ಯದ ಕರ್ಫ್ಯೂ ಶುಕ್ರವಾರ ರಾತ್ರಿ 8 ಗಂಟೆಗೆ ಪ್ರಾರಂಭವಾಗಿ ಸೋಮವಾರ ಬೆಳಗ್ಗೆ 7 ಗಂಟೆಗೆ ವರೆಗೂ ಮುಂದುವರಿಯಲಿದೆ. ಈ ಕುರಿತು ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗುವುದು.
ಏಪ್ರಿಲ್ 15ರಂದು ಪರಿಸ್ಥಿತಿ ಪುನರ್ ಅವಲೋಕನ ಮಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು.
ಮಹಾರಾಷ್ಟ್ರದಲ್ಲಿ ಕಳೆದ 24 ತಾಸಿನಲ್ಲಿ 49,447 ಹೊಸ ಕೋವಿಡ್ ಸೋಂಕು ಪ್ರಕರಣಗಳು ದಾಖಲಾಗಿದ್ದು, 277 ಮಂದಿ ಮೃತಪಟ್ಟಿದ್ದಾರೆ.