ನವದೆಹಲಿ: #ResignModi ಎಂಬ ಹ್ಯಾಶ್ ಟ್ಯಾಗ್ ಇರುವ ಪೋಸ್ಟ್ ಗಳನ್ನು ಉದ್ದೇಶಪೂರ್ವಕವಾಗಿ ಬ್ಲಾಕ್ ಮಾಡಿಲ್ಲ... ಅದೊಂದು ಪ್ರಮಾದವಶಾತ್ ಘಟನೆ ಎಂದು ಫೇಸ್ ಬುಕ್ ಸ್ಪಷ್ಟನೆ ನೀಡಿದೆ.
#ResignModi ಹ್ಯಾಶ್ ಟ್ಯಾಗ್ ಇರುವ ಪೋಸ್ಟ್ ಗಳನ್ನು ಬ್ಲಾಕ್ ಮಾಡಿದ ಕೆಲವೇ ಗಂಟೆಗಳಲ್ಲಿ ಅವುಗಳನ್ನು ಮರುಸ್ಥಾಪಿಸಿದ ಫೇಸ್ ಬುಕ್, "ಪ್ರಮಾದವಶಾತ್ ಈ ಹ್ಯಾಶ್ ಟ್ಯಾಗ್ ಪೋಸ್ಟ್ ಗಳನ್ನು ಬ್ಲಾಕ್ ಮಾಡಲಾಯಿತು. ಯಾರೂ ಬ್ಲಾಕ್ ಮಾಡುವಂತೆ ಹೇಳಿಲ್ಲ' ಎಂದು ಸ್ಪಷ್ಟನೆ ನೀಡಿದೆ.
ದೇಶಾದ್ಯಂತ ಕೋವಿಡ್ ಸಾಂಕ್ರಾಮಿಕ ರೋಗಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ವೈದ್ಯಕೀಯ ಸವಲತ್ತುಗಳು ಮತ್ತು ಅತ್ಯಗತ್ಯ ಆಕ್ಸಿಜನ್ ಕೊರತೆ ಎದುರಾಗಿ ಪ್ರತಿನಿತ್ಯ ನೂರಾರು ಮಂದಿ ಸೂಕ್ತ ಚಿಕಿತ್ಸೆ ದೊರೆಯದೆ ಬಲಿಯಾಗುತ್ತಿದ್ದಾರೆ. ಈ ಸುದ್ದಿಯ ನಡುವೆಯೇ ಮೋದಿ ಸರ್ಕಾರದ ವಿರುದ್ಧ ಜನಾಕ್ರೋಶ ಸ್ಫೋಟಗೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ #ResignModi ಹ್ಯಾಶ್ ಟ್ಯಾಗ್ ವೈರಲ್ ಆಗುತ್ತಿದೆ.
ಆದರೆ ಈ ಹ್ಯಾಶ್ ಟ್ಯಾಗ್ ಪೋಸ್ಟ್ ಗಳನ್ನು ಫೇಸ್ ಬುಕ್ ಬ್ಲಾಕ್ ಮಾಡಿದ್ದೇ ತಡ ಇದು ಸರ್ಕಾರದ ಒತ್ತಡದಿಂದಲೇ ಇದು ನಡೆದಿದೆ ಎಂದು ಇನ್ನಷ್ಟು ಆಕ್ರೋಶವನ್ನು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ಹೊರಹಾಕಲಾಗತ್ತಿದೆ. ಈ ಕುರಿತು ಎಚ್ಚೆತ್ತುಕೊಂಡ ಫೇಸ್ ಬುಕ್, ಈ ಹ್ಯಾಶ್ ಟ್ಯಾಗ್ ಪೋಸ್ಟ್ ಗಳನ್ನು ಮರುಸ್ಥಾಪಿಸಿತಲ್ಲದೆ ಸರ್ಕಾರದ ಕೋರಿಕೆ ಮೇರೆಗೆ ಹಾಗೆ ಮಾಡಿಲ್ಲ.. ಅದೊಂದು ಪ್ರಮಾದವಶಾತ್ ಘಟನೆ ಎಂದು ಹೇಳಿದೆ. ಅಲ್ಲದೆ ಹ್ಯಾಶ್ ಟ್ಯಾಗ್ ನಿಂದಲ್ಲ ಬದಲಾಗಿ ಅದರ ಜತೆಗಿದ್ದ ಕಂಟೆಂಟ್ ನಿಂದಾಗಿ ಈ ಘಟನೆ ನಡೆದಿದೆ ಎಂದು ಫೇಸ್ ಬುಕ್ ವಕ್ತಾರರು ಹೇಳಿದ್ದಾರೆ.
ಪ್ರಸ್ತುತ ವೈದ್ಯಕೀಯ ಬಿಕ್ಕಟ್ಟನ್ನು ನಿಭಾಯಿಸಲು ಅಥವಾ ಸಾಂಕ್ರಾಮಿಕದ ಕುರಿತ ನಕಲಿ ಸುದ್ದಿಗಳನ್ನು ಹರಡುತ್ತಿದ್ದ ಆರೋಪದ ಮೇರೆಗೆ ಸುಮಾರು 100 ಪೋಸ್ಟ್‌ಗಳು ಮತ್ತು ಯುಆರ್‌ಎಲ್‌ಗಳನ್ನು ಟ್ವಿಟರ್ ಮತ್ತು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳು ತೆಗೆದುಹಾಕಿವೆ.