ಪಣಜಿ: ತೌಕ್ತೆ ಚಂಡಮಾರುತದ ತೀವ್ರತೆ ಹೆಚ್ಚಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ರವಿವಾರ ಬೆಳಿಗ್ಗೆ ತಿಳಿಸಿದೆ. ಚಂಡಮಾರುತವು ಮೇ 18 ರ ಮುಂಜಾನೆ ಪೋರ್ ಬಂದರ್ ಹಾಗೂ ಮಾಹುವಾ (ಭಾವನಗರ ಜಿಲ್ಲೆ) ನಡುವೆ ಗುಜರಾತ್ ಕರಾವಳಿಯನ್ನು ದಾಟುವ ಸಾಧ್ಯತೆಯಿದೆ.
ಗೋವಾದಲ್ಲಿ ತೌಕ್ತೆ ಚಂಡಮಾರುತದಿಂದ ಇದುವರೆಗೆ ಇಬ್ಬರು ಮೃತಪಟ್ಟಿದ್ದಾರೆ. ಒಂದು ಘಟನೆಯಲ್ಲಿ, ವ್ಯಕ್ತಿಯ ಮೇಲೆ ಬೃಹತ್ ಮರ ಬಿದ್ದಿದ್ದರೆ, ಇನ್ನೊಂದರಲ್ಲಿ ಬೈಕ್ ಸವಾರನ ಮೇಲೆ ವಿದ್ಯುತ್ ಕಂಬ ಬಿದ್ದಿದೆ. 100 ಕ್ಕೂ ಹೆಚ್ಚು ಮನೆಗಳಿಗೆ ಭಾರೀ ಹಾನಿಯಾಗಿದೆ ಮತ್ತು ಇನ್ನೂ 100 ಮನೆಗಳಿಗೆ ಸಣ್ಣಪುಟ್ಟ ಹಾನಿಯಾಗಿದೆ. 500 ಕ್ಕೂ ಹೆಚ್ಚು ಮರಗಳು ಕೆಳಗೆ ಬಿದ್ದಿವೆ.
ಪ್ರಸ್ತುತ, ಗೋವಾದ ಹೆಚ್ಚಿನ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿದುಹೋಗಿದೆ. ಅನೇಕ ರಸ್ತೆಗಳನ್ನು ನಿರ್ಬಂಧಿಸಲಾಗಿದೆ. ಎಲ್ಲವನ್ನು ಪುನಃಸ್ಥಾಪಿಸಲು ಎರಡು ದಿನಗಳು ತೆಗೆದುಕೊಳ್ಳುತ್ತದೆ ಎಂದು ಸಿಎಂ ಪ್ರಮೋದ್ ಸಾವಂತ್ ಹೇಳಿದರು. ಮೇ 17 ರವರೆಗೆ ರಾಜ್ಯದಲ್ಲಿ ಭಾರಿ ಮಳೆ ಮತ್ತು ಹೆಚ್ಚಿನ ಗಾಳಿ ಬೀಸುವ ನಿರೀಕ್ಷೆಯಿದೆ.