ನವದೆಹಲಿ: ಜೂನ್‌ನಲ್ಲಿ ಒಂಬತ್ತರಿಂದ 10 ಕೋಟಿ ಕೋವಿಶೀಲ್ಡ್ ಡೋಸ್ ಗಳನ್ನು ಉತ್ಪಾದನೆ ಮಾಡಲು ಮತ್ತು ಪೂರೈಸಲು ಸಾಧ್ಯವಾಗಲಿದೆ ಎಂದು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಸರ್ಕಾರಕ್ಕೆ ಮಾಹಿತಿ ನೀಡಿದೆ ಎಂದು ಅಧಿಕೃತ ಮೂಲಗಳು ಭಾನುವಾರ ತಿಳಿಸಿವೆ.
ದೇಶದ ಅನೇಕ ರಾಜ್ಯಗಳು ಲಸಿಕೆ ಕೊರತೆ ಬಗೆಗೆ ದೂರಿದ ಬೆನ್ನಲ್ಲೇ ಈ ಪ್ರಕಟಣೆ ಹೊರಬಂದಿದೆ. ಸಾಂಕ್ರಾಮಿಕ ರೋಗದಿಂದಾಗಿ ವಿವಿಧ ಸವಾಲುಗಳ ನಡುವೆಯೂ ತನ್ನ ಉದ್ಯೋಗಿಗಳು ದಿನದ 24 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಇತ್ತೀಚೆಗೆ ಬರೆದ ಪತ್ರದಲ್ಲಿ ಎಸ್‌ಐಐ ತಿಳಿಸಿದೆ. "ಮೇ ತಿಂಗಳಲ್ಲಿ ನಮ್ಮ ಉತ್ಪಾದನಾ ಸಾಮರ್ಥ್ಯ 6.5 ಕೋಟಿ ಡೋಸೇಜ್‌ಗೆ ಹೋಲಿಸಿದರೆ ಜೂನ್ ತಿಂಗಳಲ್ಲಿ ಲಸಿಕೆಯ ಒಂಬತ್ತು ರಿಂದ 10 ಕೋಟಿ ಡೋಸ್‌ಗಳನ್ನು ತಯಾರಿಸಲು ಮತ್ತು ಪೂರೈಸಲು ಸಾಧ್ಯವಾಗುತ್ತದೆ ಎಂದು ತಿಳಿಸಲು ನಾವು ಸಂತೋಷಪಟ್ಟಿದ್ದೇವೆ" ಎಂದು ಎಸ್‌ಐಐನಲ್ಲಿನ ಸರ್ಕಾರಿ ಮತ್ತು ನಿಯಂತ್ರಣ ವ್ಯವಹಾರಗಳ ನಿರ್ದೇಶಕ ಪ್ರಕಾಶ್ ಕುಮಾರ್ ಸಿಂಗ್ ಪತ್ರದಲ್ಲಿ ತಿಳಿಸಿದ್ದಾರೆ.
ಕೋವಿಡ್ -19 ಲಸಿಕೆಗಳಲ್ಲಿ ಭಾರತವನ್ನು 'ಆತ್ಮನಿರ್ಭರ' (ಸ್ವಾವಲಂಬಿ) ಯನ್ನಾಗಿ ಮಾಡಲು ಮತ್ತು ಅದನ್ನು ದೇಶದ ಜನರಿಗೆ ಲಭ್ಯವಾಗುವಂತೆ ಮಾಡಲು ಅವರು ಮಾಡಿದ ಪ್ರಯತ್ನದ ವಿವಿಧ ಹಂತಗಳಲ್ಲಿ "ಅಮೂಲ್ಯವಾದ ಮಾರ್ಗದರ್ಶನ ಮತ್ತು ನಿರಂತರ ಬೆಂಬಲದ " ಬಗ್ಗೆ ಸಿಂಗ್ ಶಾ ಅವರಿಗೆ ಧನ್ಯವಾದ ಅರ್ಪಿಸಿದರು.
"ಭಾರತ ಸರ್ಕಾರದ ಬೆಂಬಲದೊಂದಿಗೆ ಮತ್ತು ನಿಮ್ಮ ಮಾರ್ಗದರ್ಶನದಲ್ಲಿ, ಮುಂಬರುವ ತಿಂಗಳಲ್ಲಿ ನಮ್ಮ ಕೋವಿಶೀಲ್ಡ್ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ನಮ್ಮ ಎಲ್ಲ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಮೂಲಕ ನಾವು ನಮ್ಮ ಅತ್ಯುತ್ತಮ ಪ್ರಯತ್ನ ಮಾಡುತ್ತಿದ್ದೇವೆ ಎಂದು ನಾವು ನಿಮಗೆ ಭರವಸೆ ನೀಡುತ್ತೇವೆ."
ಭಾರತವು ಪ್ರಸ್ತುತ ತನ್ನ ಕೋವಿಡ್ -19 ರೋಗನಿರೋಧಕ ಕಾರ್ಯಕ್ರಮದಲ್ಲಿ ಎಸ್‌ಐಐ ನ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್‌ನ ಕೊವ್ಯಾಕ್ಸೀನ್ ಲಸಿಕೆಗಳನ್ನು ಬಳಸುತ್ತಿದೆ. ರಷ್ಯಾದ ಸ್ಪುಟ್ನಿಕ್ ವಿ ತುರ್ತು ಬಳಕೆಗಾಗಿ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ (ಡಿಸಿಜಿಐ) ಅನುಮೋದನೆ ಪಡೆದ ಮೂರನೇ ಲಸಿಕೆ ಮತ್ತು ಇದನ್ನು ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಬಳಸಲಾಗುತ್ತಿದೆ.