ನವದೆಹಲಿ: ಮೇಘಾಲಯದ ವೆಸ್ಟ್ ಖಾಸಿ ಹಿಲ್ಸ್ ಜಿಲ್ಲೆಯಲ್ಲಿ ದೈತ್ಯ ಪ್ರಾಣಿ ಡೈನೋಸಾರ್‌ಗಳ ಮೂಳೆ ಸೇರಿದಂತೆ ದೇಹದ ಇತರ ಭಾಗಗಳನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಇವುಗಳು 10 ಕೋಟಿ ವರ್ಷಗಳಷ್ಟು ಹಿಂದಿನವು ಎಂದು ಅಂದಾಜಿಸಿದ್ದಾರೆ.
ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾದ (ಜಿಎಸ್‌ಐ) ಪಳೆಯುಳಿಕೆವಿಜ್ಞಾನ ವಿಭಾಗದ ಸಂಶೋಧಕರು ಈಶಾನ್ಯ ಭಾರತದಲ್ಲಿ ಕೈಗೊಂಡಿದ್ದ ಕ್ಷೇತ್ರ ಅಧ್ಯಯನ ಸಂದರ್ಭದಲ್ಲಿ ಇವುಗಳನ್ನು ಪತ್ತೆ ಮಾಡಿದ್ದು, ಅಧ್ಯಯನ ವರದಿ ಇನ್ನೂ ಪ್ರಕಟವಾಗಬೇಕಿದೆ.
ಟೈಟಾನೋಸಾರಿಯನ್ ಮೂಲದ ಡೈನೋಸಾರ್‌ಗಳು ದೇಶದ ಈಶಾನ್ಯ ಭಾಗದಲ್ಲಿ ವಾಸವಿದ್ದ ಬಗ್ಗೆ ಇದೇ ಮೊದಲ ಬಾರಿಗೆ ಪಳೆಯುಳಿಕೆಗಳು ಲಭಿಸಿವೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಈ ದೈತ್ಯ ಪ್ರಾಣಿಯ ಮೂಳೆಗಳು ಈಗಾಗಲೇ ಲಭಿಸಿವೆ. ಇವುಗಳ ಮೂಳೆಗಳು ಸಿಕ್ಕ ಐದನೇ ರಾಜ್ಯ ಮೇಘಾಲಯವಾಗಿದೆ.
'2001ರಲ್ಲಿ ಮೇಘಾಲಯದಲ್ಲಿ ಡೈನೋಸಾರ್‌ಗಳ ಮೂಳೆಗಳು ಪತ್ತೆಯಾಗಿದ್ದವು. ಆದರೆ, ಅವುಗಳು ಬಹಳ ಚೂರುಗಳಾಗಿದ್ದರಿಂದ ಸಮರ್ಪಕವಾಗಿ ಸಂರಕ್ಷಣೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಜೀವಿ ವರ್ಗೀಕರಣವಿಜ್ಞಾನದ ಪ್ರಕಾರ ಅವುಗಳ ವಿಂಗಡಣೆ, ಅಧ್ಯಯನ ಸಾಧ್ಯವಾಗಿರಲಿಲ್ಲ' ಎಂದು ಜಿಎಸ್‌ಐನ ಹಿರಿಯ ಭೂವಿಜ್ಞಾನಿ ಅರಿಂದಮ್ ರಾಯ್ ಹೇಳಿದರು.