ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ಮಧ್ಯೆ 12ನೇ ತರಗತಿ ಪರೀಕ್ಷೆ ನಡೆಸಬೇಕೆ, ಬೇಡವೇ ಎಂದು ಇನ್ನೆರಡು ದಿನಗಳೊಳಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.
ನ್ಯಾಯಮೂರ್ತಿಗಳಾದ ಎ ಎಂ ಖನ್ವಿಲ್ಕರ್ ಮತ್ತು ದಿನೇಶ್ ಮಹೇಶ್ವರಿ ಅವರನ್ನೊಳಗೊಂಡ ನ್ಯಾಯಪೀಠಕ್ಕೆ ಉತ್ತರಿಸಿದ ಅಟೊರ್ನಿ ಜನರಲ್ ಕೆ ಕೆ ವೇಣುಗೋಪಾಲ್, ಇನ್ನೆರಡು ದಿನಗಳಲ್ಲಿ ಸರ್ಕಾರ ನಿರ್ಧಾರಕ್ಕೆ ಬರಲಿದೆ. ಗುರುವಾರದವರೆಗೆ ನ್ಯಾಯಾಲಯ ನಮಗೆ ಸಮಯಾವಕಾಶ ನೀಡುತ್ತದೆ ಎಂದು ಭಾವಿಸುತ್ತೇವೆ. ಆಗ ಸರ್ಕಾರ ಅಂತಿಮ ನಿರ್ಧಾರಕ್ಕೆ ಬರುತ್ತದೆ ಎಂದರು.
ಇದಕ್ಕೆ ನ್ಯಾಯಪೀಠ, ಪರವಾಗಿಲ್ಲ, ನೀವು ನಿರ್ಧಾರ ತೆಗೆದುಕೊಳ್ಳಿ. ಅದಕ್ಕೆ ನೀವು ಅರ್ಹದಾರರು, ಕಳೆದ ವರ್ಷದ ನೀತಿಯನ್ನು ಬಿಡುವುದಿದ್ದರೆ ಅದಕ್ಕೆ ಸರಿಯಾದ ಕಾರಣ ನೀಡಬೇಕು ಎಂದು ನ್ಯಾಯಪೀಠ ಅಟೊರ್ನಿ ಜನರಲ್ ಅವರಿಗೆ ಹೇಳಿತು.
ಇಂದಿನ ಕೊರೋನಾ ಸ್ಥಿತಿಗತಿ ನಡುವೆ ಸಿಬಿಎಸ್ ಇಯ 12ನೇ ತರಗತಿ ಮತ್ತು ಕೌನ್ಸಿಲ್ ಫಾರ್ ದ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಪರೀಕ್ಷೆ(ಸಿಐಎಸ್ ಸಿಇ)ಗಳನ್ನು ರದ್ದುಪಡಿಸಬೇಕೆಂದು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಕೆಯಾಗಿದೆ.
ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಕಳೆದ ವರ್ಷ ಜುಲೈ 1 ರಿಂದ 15 ರವರೆಗೆ ನಿಗದಿಯಾಗಿದ್ದ ಬೋರ್ಡ್ ಪರೀಕ್ಷೆಗಳನ್ನು ರದ್ದುಗೊಳಿಸುವ ಸಿಬಿಎಸ್‌ಇ ಮತ್ತು ಸಿಐಎಸ್‌ಸಿಇ ಯೋಜನೆಗಳನ್ನು 2020 ರ ಜೂನ್ 26 ರಂದು ಸುಪ್ರೀಂ ಕೋರ್ಟ್ ಅನುಮೋದಿಸಿತ್ತು ಮತ್ತು ಪರೀಕ್ಷಕರ ಮೌಲ್ಯಮಾಪನಕ್ಕಾಗಿ ಮಂಡಳಿಯ ಸೂತ್ರವನ್ನು ಅನುಮೋದಿಸಿತು.
ಸುಪ್ರೀಂ ಕೋರ್ಟ್ ನ್ಯಾಯಪೀಠ ವಿಚಾರಣೆಯನ್ನು ಜೂನ್ 3ಕ್ಕೆ ಮುಂದೂಡಿದೆ. ಮಮತಾ ಶರ್ಮಾ ಎಂಬುವವರು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿ, 12 ನೇ ತರಗತಿಯ ಫಲಿತಾಂಶವನ್ನು ನಿರ್ದಿಷ್ಟ ಸಮಯದೊಳಗೆ ಘೋಷಿಸಲು "ವಸ್ತುನಿಷ್ಠ ವಿಧಾನ" ವನ್ನು ರೂಪಿಸಲು ನಿರ್ದೇಶನ ನೀಡಬೇಕೆಂದು ಕೋರಿದ್ದರು.