ನವದೆಹಲಿ: 12ನೇ ತರಗತಿ ಪರೀಕ್ಷೆ ನಡೆಸುವ ಕುರಿತು ಅಂತಿಮ ನಿರ್ಧಾರವನ್ನು ವ್ಯಾಪಕ ಸಮಾಲೋಚನೆ ಪ್ರಕ್ರಿಯೆಗಳನ್ನು ನಡೆಸಿ ತೆಗೆದುಕೊಳ್ಳಲಾಗುವುದು ಎಂದು ಸೋಮವಾರ ಸರ್ಕಾರದ ಮೂಲಗಳು ತಿಳಿಸಿವೆ.
ಜೂನ್1ರ ವೇಳೆಗೆ ಅಂತಿಮ ನಿರ್ಧಾರ ಪ್ರಕಟಿಸಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಕ್ರಿಯಾಲ್ ನಿಶಾಂಕ್ ತಿಳಿಸಿದ್ದಾರೆ.ಈ ಕುರಿತು ಭಾನುವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು. ಈ ಸಭೆಯಲ್ಲಿ ಕೇಂದ್ರ ಸಚಿವರಾದ ಸ್ಮೃತಿ ಇರಾನಿ, ಪ್ರಕಾಶ್ ಜಾವಡೇಕರ್ ಮತ್ತು ಸಂಜಯ್ ಧೋತ್ರೆ ಪಾಲ್ಗೊಂಡಿದ್ದರು. ಜತೆಗೆ, ರಾಜ್ಯಗಳು ಮತ್ತು ಕೇಂದ್ರಾಡಳಿ ಪ್ರದೇಶಗಳ ಶಿಕ್ಷಣ ಸಚಿವರು ಮತ್ತು ಕಾರ್ಯದರ್ಶಿಗಳು ಪಾಲ್ಗೊಂಡಿದ್ದರು. 12ನೇ ತರಗತಿ ಜತೆ ತಾಂತ್ರಿಕ, ವೈದ್ಯಕೀಯ ಮತ್ತು ಇತರ ವೃತ್ತಿಪರ ಕೋಸ್‌ಗಳಿಗೆ ನಡೆಸಬೇಕಿರುವ ಪ್ರವೇಶ ಪರೀಕ್ಷೆಗಳ ಕುರಿತು ಚರ್ಚಿಸಲಾಯಿತು. ಮಕ್ಕಳ ಮೇಲೆ ಕೋವಿಡ್-19 ಸಾಂಕ್ರಾಮಿಕದ ದುಷ್ಪರಿಣಾಮಗಳನ್ನು ಗಮನದಲ್ಲಿರಿಸಿಕೊಂಡು ಅಂತಿಮ ನಿರ್ಧಾರ ತೆಗೆದುಕೊಳ್ಳಲು ಸಭೆ ನಿರ್ಧರಿಸಿದೆ.
12ನೇ ತರಗತಿ ಪರೀಕ್ಷೆಗಳನ್ನು ನಡೆಸುವ ಕುರಿತು ರಾಜ್ಯಗಳಲ್ಲಿ ಒಮ್ಮತ ಮೂಡಬೇಕಿದೆ. ವ್ಯಾಪಕ ಚರ್ಚೆ ನಡೆಸಿದ ಬಳಿಕ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ನಿಶಾಂಕ್ ತಿಳಿಸಿದ್ದಾರೆ.