ನವದೆಹಲಿ: ಕೋವಿಡ್ -19 ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಹಿನ್ನೆಲೆಯಲ್ಲಿ 12ನೇ ತರಗತಿಯ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಮಂಡಳಿ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ನಿರ್ದೇಶನ ಕೋರಿ ಶುಕ್ರವಾರ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆ.
ಅರ್ಜಿದಾರರ ಪರ ವಕೀಲ ಮಮತಾ ಶರ್ಮಾ, ಮುಗ್ಧ ವಿದ್ಯಾರ್ಥಿಗಳಿಗೆ ಪರೀಕ್ಷೆ ಕುರಿತು ಅನಿಯಂತ್ರಿತ, ಅಮಾನವೀಯ ನಿರ್ದೇಶನಗಳನ್ನು ನೀಡಲಾಗಿದೆ. ಕಳೆದ ವರ್ಷ ಅವರು ಪ್ರಸ್ತಾಪಿಸಿದ ಮತ್ತು ಅಂಗೀಕರಿಸಿದ ನಿರ್ದೇಶನಗಳನ್ನು ಅನುಸರಿಸುವ ಬದಲು ಅಂತಿಮ ಪರೀಕ್ಷೆಯನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಬೇಕು ಎಂದು ಕೋರಲಾಗಿದೆ.
12ನೇ ತರಗತಿಯ ಫಲಿತಾಂಶಗಳನ್ನು ನಿರ್ದಿಷ್ಟ ಸಮಯದೊಳಗೆ ಘೋಷಿಸಲು ವಸ್ತುನಿಷ್ಠ ವಿಧಾನವನ್ನು ರೂಪಿಸುವಂತೆ ಮನವಿ ಮಾಡಲಾಗಿದ್ದು, ಆನ್‌ಲೈನ್ ಅಥವಾ ಆಫ್‌ಲೈನ್ ಪರೀಕ್ಷೆಗಳು ಸಹ ಪ್ರಸ್ತುತ ಪರಿಸ್ಥಿತಿಯಲ್ಲಿ ಕಾರ್ಯಸಾಧ್ಯವಲ್ಲ ಎಂದು ಮಮತಾ ಶರ್ಮಾ ಹೇಳಿದ್ದಾರೆ.
ಕೊರೋನಾ ಹಿನ್ನೆಲೆಯಲ್ಲಿ ಮೇ 4ರಿಂದ ಜೂನ್ 14ರ ವರೆಗೆ ನಿಗದಿಯಾಗಿದ್ದ 12ನೇ ತರಗತಿಯ ಸಿಬಿಎಸ್ ಸಿ ಪರೀಕ್ಷೆಯನ್ನು ಮುಂದೂಡಲಾಗಿದೆ.
ಈ ಮಧ್ಯೆ, ಕೋವಿಡ್ -19 ಸಾಂಕ್ರಾಮಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಕೆಲವು ವಿದ್ಯಾರ್ಥಿಗಳು ಮತ್ತು ಪೋಷಕರು ಒತ್ತಾಯಿಸುತ್ತಿದ್ದಾರೆ. ಆದರೆ 12ನೇ ತರಗತಿ ಪರೀಕ್ಷೆ ರದ್ದುಗೊಳಿಸುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್‌ಇ) ಇಂದು ಸ್ಪಷ್ಟಪಡಿಸಿದೆ.