ನವದೆಹಲಿ: ಪೌಷ್ಟಿಕ ಆಹಾರ ವಿತರಣಾ ಸೇವಾ ಕಾರ್ಯಗಳ ಮೇಲೆ ನಿಗಾ ಇಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ (ಡಬ್ಲ್ಯುಸಿಡಿ) ಪ್ರಸಕ್ತ ವರ್ಷದ ಮಾರ್ಚ್‌ನಲ್ಲಿ ಪ್ರಾರಂಭಿಸಿದ 'ಪೋಷಣ್ ಟ್ರ್ಯಾಕರ್ ಆಯಪ್' ಅನ್ನು 14.05 ಲಕ್ಷಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರು ಡೌನ್‌ಲೋಡ್ ಮಾಡಿಕೊಂಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಗುರುವಾರ ತಿಳಿಸಿದ್ದಾರೆ.
ಪೌಷ್ಟಿಕ ಆಹಾರ ವಿತರಣಾ ಸೇವೆಗಳಲ್ಲಿ ಹೆಚ್ಚಿನ ಪಾರದರ್ಶಕತೆ ತಂದು, ಫಲಿತಾಂಶಗಳ ನೈಜ ಸಮಯದ ಮೇಲ್ವಿಚಾರಣೆಗಾಗಿ ಈ ಆಯಪ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಇದು ತಾಯಿ ಮತ್ತು ಮಕ್ಕಳ ಆರೋಗ್ಯ ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.
ಪೋಷಣ್ ಟ್ರ್ಯಾಕರ್, ಅಂಗನವಾಡಿ ಕೇಂದ್ರದ 360 ಡಿಗ್ರಿ ವೀಕ್ಷಣೆಯ ಜತೆಗೆ ಸೇವೆಗಳ ಮೇಲೆ ಸಮಗ್ರವಾಗಿ ನಿಗಾ ಇಡುತ್ತದೆ. ಗರ್ಭಿಣಿಯರು, ಹಾಲುಣಿಸುವ ತಾಯಂದಿರು ಮತ್ತು ಮಕ್ಕಳಿಗೆ ಪೌಷ್ಟಿಕ ಆಹಾರ ಪದಾರ್ಥಗಳ ವಿತರಣೆ ಮತ್ತು ಫಲಾನುಭವಿಗಳ ನಿರ್ವಹಣೆ ಕುರಿತು ನಿಗಾ ಇಡುತ್ತದೆ. ಸಮಯಕ್ಕೆ ಸರಿಯಾಗಿ ಇವು ತಲುಪುತ್ತಿವೆಯಾ ಎಂಬುದರ ಕುರಿತು ಮಾಹಿತಿ ಇದು ರವಾನಿಸುತ್ತದೆ ಎಂದು ತಿಳಿಸಿದರು.
'ಪೋಷಣ್ ಟ್ರ್ಯಾಕರ್ ಆಯಪ್ ಅನ್ನು 14.05 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಜತೆಗೆ 7.08 ಕೋಟಿಗೂ ಹೆಚ್ಚು ಫಲಾನುಭವಿಗಳು ಆಯಪ್ ಬಳಸುತ್ತಿದ್ದಾರೆ. 1.24 ಕೋಟಿ ಫಲಾನುಭವಿಗಳು ಮನೆಗೆ ತೆಗೆದುಕೊಂಡು ಹೋಗುವ ಆಹಾರ ಪದಾರ್ಥದ ಕುರಿತು ಇದರ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಅಂತೆಯೇ 68.79 ಲಕ್ಷ ಫಲಾನುಭವಿಗಳಿಗೆ ನೀಡುತ್ತಿರುವ ಬೇಯಿಸಿದ ಬಿಸಿ ಆಹಾರ ವಿತರಣೆಯನ್ನೂ ಟ್ರ್ಯಾಕ್ ಮಾಡಲಾಗುತ್ತಿದೆ' ಎಂದು ಅವರು ಟ್ವೀಟ್ ಮಾಡಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಅಭಿವೃದ್ಧಿಪಡಿಸಿರುವ ಈ ಆಯಪ್ ಎಲ್ಲ ಅಂಗನವಾಡಿ ಕೇಂದ್ರಗಳು, ಅಂಗನವಾಡಿಯ ಕಾರ್ಯಕರ್ತೆಯರು, ಫಲಾನುಭವಿಗಳ ನೈಜ-ಸಮಯದ ಮೇಲ್ವಿಚಾರಣೆ ಮಾಡುವುದರ ಜತೆಗೆ ಸಮಗ್ರ ಚಟುವಟಿಕೆಯ ಮೇಲೆ ನಿಗಾ ಇಡಲು ನೆರವಾಗಿದೆ ಎಂದಿದ್ದಾರೆ.