ತಿರುವನಂತಪುರ: ಕೇರಳ ಸಹಿತ ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಕೇಂದ್ರ ಸರ್ಕಾರ ಮೇ ತಿಂಗಳಲ್ಲೇ 14 ಬಾರಿ ತೈಲ ದರ ಏರಿಸಿದೆ. ಒಟ್ಟಾರೆ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 3.30 ರೂ ಹಾಗೂ ಡೀಸೆಲ್ ಮೇಲೆ 4.50 ರೂ. ಹೆಚ್ಚಳವಾಗಿದೆ.
ಚುನಾವಣೆಗೆ ದಿನಾಂಕ ನಿಗದಿಯಾದ ನಂತರ ಏಪ್ರಿಲ್ ನಲ್ಲಿ 2 ಬಾರಿ ದರ ಏರಿಕೆಯಾಗಿತ್ತು. ಆದರೆ, ಇದೀಗ ಕೊರೊನಾ ಮಧ್ಯೆಯೇ ಮೇ 4 ರಿಂದ ಮೇ 27 ರವರೆಗೆ 14 ಬಾರಿ ದರ ಹೆಚ್ಚಿಸಲಾಗಿದೆ. ಸದ್ಯ ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ಗೆ 96.80 ರೂ ಹಾಗೂ ಡೀಸೆಲ್ ಗೆ 89.70 ರೂ.ಇದೆ. ಅಬಕಾರಿ ಸುಂಕ ಹಾಗೂ ಮೌಲ್ಯ ವರ್ಧಿತ ತೆರಿಗೆ(ವ್ಯಾಟ್) ಏರಿಕೆ ಕಾರಣವೊಡ್ಡಿ ಬೆಲೆ ಏರಿಸಲಾಗುತ್ತಿದೆ ಎನ್ನಲಾಗಿದೆ.
ಶತಕ ಸಮೀಪ: ಬರುವ ದಿನಗಳಲ್ಲಿ ರಾಜ್ಯದಲ್ಲಿ ಒಂದು ಲೀಟರ್ ಪೆಟ್ರೋಲ್ ಗೆ 100 ರೂ. ಸಮೀಪಕ್ಕೆ ಬರಲಿದೆ. ಈಗಾಗಲೇ ದಿನಕ್ಕೆ ಸರಾಸರಿ 25 ರಿಂದ 30 ಪೈಸೆಯಂತೆ ದರ ಏರಿಸಲಾಗುತ್ತಿದೆ. ಇನ್ನೂ ಪೆಟ್ರೋಲ್ ಮೇಲೆ 30 ಪೈಸೆಯಂತೆ 11 ಬಾರಿ ದರ ಏರಿಸಿದರೆ ಶತಕ ಮುಟ್ಟಲಿದೆ.
ಕೊರೊನಾದಿಂದ ತತ್ತರಿಸಿರುವ ರಾಜ್ಯದ ಜನರಿಗೆ ನಿರಂತರ ತೈಲ ದರ ಏರಿಕೆಯಿಂದ ಮತ್ತಷ್ಟು ಸಂಕಷ್ಟ ಅನುಭವಿಸುವಂತಾಗಿದೆ. ಈಗಾಗಲೇ ದಿನ ಬಳಕೆಯ ವಸ್ತುಗಳ ಬೆಲೆ ಹೆಚ್ಚಳದಿಂದ ಜನರು ಜರ್ಜರಿತರಾಗಿದ್ದಾರೆ. ಕಳೆದ ಬಾರಿ ಕೊರೊನಾ ಮೊದಲನೇ ಅಲೆಯಿಂದ ಈವರೆಗೆ ನಿರಂತರವಾಗಿ ತೈಲ ದರದಲ್ಲಿ ಏರಿಕೆಯಾಗುತ್ತಿದೆ.