ತಿರುವನಂತಪುರ: ಗುರುವಾರ ನೂತನ ಸರ್ಕಾರದ ಪ್ರಮಾಣವಚನ ಸಮಾರಂಭ ನಡೆದ ತಿರುವನಂತಪುರ ಸೆಂಟ್ರಲ್ ಸ್ಟೇಡಿಯಂ ವೇದಿಕೆಯಲ್ಲಿ ಕೋವಿಡ್ ವ್ಯಾಕ್ಸಿನೇಷನ್ ಶುಕ್ರವಾರದಿಂದ ಪ್ರಾರಂಭವಾಗಿದೆ. 18 ರಿಂದ 44 ವರ್ಷದೊಳಗಿನ ಮುಂಚೂಣಿ ಹೋರಾಟಗಾರರಿಗೆ ವ್ಯಾಕ್ಸಿನೇಷನ್ ನೀಡಲಾಯಿತು. ಪ್ರಮಾಣವಚನ ಸಮಾರಂಭ ಆಯೋಜನೆಗೊಂಡ ಟೆಂಟ್ ನ್ನು ತೆಗೆಯದೆ ಇಲ್ಲಿ ವ್ಯಾಕ್ಸಿನೇಷನ್ ಪ್ರಾರಂಭವಾಗುವುದೆಂದು ಸರ್ಕಾರ ತಿಳಿಸಿತ್ತು.
ಶುಕ್ರವಾರ ಮೊದಲ ದಿನ ಈ ಟೆಂಟ್ ನಲ್ಲಿ 150 ಮಂದಿ ಜನರಿಗೆ ಲಸಿಕೆ ನೀಡಲಾಯಿತು. ಶನಿವಾರ 200 ಜನರಿಗೆ ಲಸಿಕೆ ನೀಡಲಾಗುವುದು ಎಂದು ಅಧಿಕೃತರು ತಿಳಿಸಿದ್ದಾರೆ. ಸಿಬ್ಬಂದಿ ಲಭ್ಯತೆ ಸಾಕಷ್ಟಿದ್ದರೆ ಪ್ರತಿದಿನ ಹೆಚ್ಚಿನ ಜನರಿಗೆ ಲಸಿಕೆ ನೀಡಲಾಗುವುದೆಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಎರಡನೇ ಪಿಣರಾಯಿ ಸರ್ಕಾರದ ಪ್ರಮಾಣವಚನ ಸ್ವೀಕಾರಕ್ಕಾಗಿ ಸೆಂಟ್ರಲ್ ಸ್ಟೇಡಿಯಂನಲ್ಲಿ 80,000 ಚದರ ಅಡಿ ಮಂಟಪವನ್ನು ಸ್ಥಾಪಿಸಲಾಗಿತ್ತು. ಸಮುದಾಯವನ್ನು ಗಮನದಲ್ಲಿರಿಸಿ ಟೆಂಟ್ ನ್ನು ಕೆಡವದೆ ಹೆಚ್ಚಿನ ಜನರಿಗೆ ಲಸಿಕೆ ನೀಡಲು ಒತ್ತಾಯಗಳು ಕೇಳಿಬಂದಿದ್ದವು. ಪ್ರಮಾಣವಚನಕ್ಕೆ ಸಿದ್ಧಪಡಿಸಿದ ವೇದಿಕೆಯನ್ನು ನೆಲಸಮ ಮಾಡಬಾರದು ಮತ್ತು ವ್ಯಾಕ್ಸಿನೇಷನ್‍ಗೆ ಬಳಸಬೇಕು ಎಂದು ಯುವ ಕಾಂಗ್ರೆಸ್ಸ್ ಮುಖಂಡರೂ, ಖ್ಯಾತ ವೈದ್ಯರೂ ಆದ ಎಸ್‍ಎಸ್ ಲಾಲ್ ಬೇಡಿಕೆ ಇಟ್ಟಿದ್ದರು.
'ಪ್ರಮಾಣವಚನ ಸಮಾರಂಭಕ್ಕಾಗಿ ನಿರ್ಮಿಸಲಾದ ಎಂಭತ್ತು ಸಾವಿರ ಚದರ ಅಡಿ ಮಂಟಪವು ಐದು ಸಾವಿರ ಜನರಿಗೆ ಕುಳಿತುಕೊಳ್ಳಲು ಸಾಧ್ಯವಾಗುವ ವಿಸ್ತಾರತೆ ಹೊಂದಿದೆ. ಉತ್ತಮ ವಾತಾಯನ ಹೊಂದಿರುವ ವಿಶಾಲವಾದ ಟೆಂಟ್ ಆಗಿದ್ದು, ಈ ಸಂದರ್ಭ ಕ್ರೀಡಾಂಗಣದಲ್ಲಿ ಯಾವುದೇ ಕ್ರೀಡಾಕೂಟಗಳಿಲ್ಲದ ಕಾರಣ ಕೆಡವಬಾರದು. ಇಲ್ಲಿ ಕೋವಿಡ್ ವ್ಯಾಕ್ಸಿನೇಷನ್ ಗೆ ವ್ಯವಸ್ಥೆಗೊಳಿಸಬೇಕು. ವಿಶೇಷವಾಗಿ ವೃದ್ಧರಿಗೆ ಅನುಕೂಲವಾಗಲಿದೆ ಎಂದು ಎಸ್.ಎಸ್.ಲಾಲ್ ಹೇಳಿದ್ದರು.