ನವದೆಹಲಿ: ಮಹಾಮಾರಿ ಕೋವಿಡ್ ವೈರಸ್ ಎರಡನೇ ಅಲೆಯಿಂದ ತತ್ತರಿಸಿ ಹೋಗಿರುವ ಭಾರತ ಕೋವಿಡ್ ವಿರುದ್ಧ ಸಮರ್ಥವಾಗಿ ಹೋರಾಡಲು ಸಾಮಾಜಿಕ ಜಾಲತಾಣ ದೈತ್ಯ ಕಂಪನಿ ಟ್ವಿಟರ್ 15 ಮಿಲಿಯನ್ ಡಾಲರ್ (1,10,20,50,000 ರೂಪಾಯಿ) ದೇಣಿಗೆಯನ್ನು ನೀಡಿದೆ.
ಟ್ವಿಟರ್ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಜಾಕ್ ಪ್ಯಾಟ್ರಿಕ್ ಡೋರ್ಸೆ ಸೋಮವಾರ ಟ್ವೀಟ್ ಮಾಡಿದ್ದು, 15 ಮಿಲಿಯನ್ ಡಾಲರ್ ಅನ್ನು ದೇಶದ ಮೂರು ಸರ್ಕಾರೇತರ ಸಂಸ್ಥೆಗಳು (ಕೇರ್), ನೆರವು ಭಾರತ ಮತ್ತು ಸೇವಾ ಇಂಟರ್ನ್ಯಾಷನಲ್ ಯುಎಸ್‌ಎಗೆ ನೀಡಿರುವುದಾಗಿ ತಿಳಿಸಿದ್ದಾರೆ.
ಎನ್ಜಿಒ ಕೇರ್ಗೆ 10 ಮಿಲಿಯನ್ ಡಾಲರ್ ನೀಡಲಾಗಿದ್ದು, ನೆರವು ಭಾರತ ಮತ್ತು ಸೇವಾ ಇಂಟರ್ನ್ಯಾಷನಲ್ ಯುಎಸ್‌ಎ ತಲಾ 2.5 ಮಿಲಿಯನ್ ಡಾಲರ್ ಸ್ವೀಕರಿಸಿದೆ. ಸೇವಾ ಇಂಟರ್ನ್ಯಾಷನಲ್, ಹಿಂದೂ ನಂಬಿಕೆ ಆಧಾರಿತ, ಮಾನವೀಯ ಮತ್ತು ಲಾಭರಹಿತ ಸೇವಾ ಸಂಸ್ಥೆಯಾಗಿದೆ.
ಆಮ್ಲಜನಕ ಸಾಂದ್ರಕಗಳು, ವೆಂಟಿಲೇಟರ್ಗಳು, ಬೈಪ್ಯಾಪ್ (ಬಿಲೆವೆಲ್ ಪಾಸಿಟಿವ್ ಏರ್ವೇ ಪ್ರೆಸ್ಸರ್) ಮತ್ತು ಸಿಪಿಎಪಿ (ಕಂಟಿನ್ಯೂಸ್ ಪಾಸಿಟಿವ್ ಏರ್ವೇ ಪ್ರೆಸ್ಸರ್) ಸೇರಿದಂತೆ ಮುಂತಾದ ಜೀವ ಉಳಿಸುವ ಉಪಕರಣಗಳ ಸಂಗ್ರಹಕ್ಕೆ ಬೆಂಬಲವಾಗಿ ಟ್ವಿಟರ್ ಈ ಅನುದಾನವನ್ನು ನೀಡಿದೆ.
'ಕೋವಿಡ್ ವಿರುದ್ಧದ ಭಾರತ ಹೋರಾಟಕ್ಕೆ ನೆರವು' ಅಭಿಯಾನದ ಅಡಿ ಸೇವಾ ಇಂಟರ್ನ್ಯಾಷನಲ್ ಹಣ ಸಂಗ್ರಹಿಸಲಾಗಿದೆ ಎಂದು ಸ್ಯಾನ್ ಫ್ರ್ಯಾನ್ಸಿಸ್ಕೋ ಮೂಲದ ದೈತ್ಯ ಕಂಪನಿಯಾದ ಟ್ವಿಟರ್ ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಸರ್ಕಾರಿ ಆಸ್ಪತ್ರೆಗಳು ಮತ್ತು ಕೋವಿಡ್ -19 ಆರೈಕೆ ಕೇಂದ್ರಗಳು ಮತ್ತು ಆಸ್ಪತ್ರೆಗಳಿಗೆ ಉಪಕರಣಗಳನ್ನು ವಿತರಿಸಲಾಗುವುದು ಎಂದು ಟ್ವಿಟರ್ ಹೇಳಿದೆ.