ನವದೆಹಲಿ: ಲಸಿಕಾ ಕೇಂದ್ರಗಳಲ್ಲಿ ಜನದಟ್ಟಣೆ ತಪ್ಪಿಸಲು ಜೂನ್ ಮಧ್ಯ ಭಾಗದವರೆಗಿನ ಜಿಲ್ಲಾವಾರು ಮತ್ತು ವ್ಯಾಕ್ಸಿನೇಷನ್ ಕೇಂದ್ರವಾರು ಯೋಜನೆ ಸಿದ್ಧಪಡಿಸುವಂತೆ ಮತ್ತು ಅದನ್ನು ಪ್ರಚಾರ ಮಾಡುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚಿಸಿದೆ.
ಕೇಂದ್ರ ಸರ್ಕಾರ ಹಂಚಿಕೊಂಡ ಅಂಕಿ ಅಂಶಗಳ ಪ್ರಕಾರ, ಮೇ 1 ರಿಂದ ಜೂನ್ 15 ರ ನಡುವೆ ಕೇಂದ್ರದ ಕೋಟಾದಡಿ ರಾಜ್ಯಗಳಿಗೆ ಒಟ್ಟು 5,86,29000 ಡೋಸ್ ಲಸಿಕೆಯನ್ನು ರಾಜ್ಯಗಳಿಗೆ ನೀಡಲಾಗುವುದು ಎಂದು ತಿಳಿಸಲಾಗಿದೆ. ಇದರಲ್ಲಿ ಶೇ. 70 ರಷ್ಟು ಲಸಿಕೆಯನ್ನು 45 ವರ್ಷ ಮೇಲ್ಪಟ್ಟವರ ಎರಡನೇ ಡೋಸ್ ಗಾಗಿ ಬಳಸುವಂತೆ ಮತ್ತು ಉಳಿದ ಶೇ. 30 ರಷ್ಟು ಲಸಿಕೆಯನ್ನು ಅವರ ಮೊದಲ ಡೋಸ್ ಗೆ ಬಳಸುವಂತೆ ಸೂಚಿಸಲಾಗಿದೆ.
ಆದಾಗ್ಯೂ, ಕೇಂದ್ರ ಸರ್ಕಾರ 18 ರಿಂದ 44 ವರ್ಷದವರಿಗೆ ಯಾವದೇ ಲಸಿಕೆ ಪೂರೈಸುವುದಿಲ್ಲ ಎಂದು ಹೇಳಿದೆ.
ಇದಲ್ಲದೆ, ಕೋವಿಶೀಲ್ಡ್ ಮತ್ತು ಕೋವಾಕ್ಸಿನ್‌ನ ಲಸಿಕೆ ತಯಾರಕರಿಂದ ಪಡೆದ ಮಾಹಿತಿಯ ಪ್ರ ಕಾರ, ರಾಜ್ಯಗಳು ನೇರವಾಗಿ ಖರೀದಿಸಿದ ಒಟ್ಟು 4 ಕೋಟಿ, 87 ಲಕ್ಷ ಮತ್ತು 55 ಸಾವಿರ ಡೋಸ್ ಲಸಿಕೆ ಮುಂದಿನ ತಿಂಗಳ ಅಂತ್ಯದವರೆಗೆ ಆಯಾ ರಾಜ್ಯಗಳಿಗೆ ಪೂರೈಕೆಯಾಗಲಿದೆ.
ಕಳೆದ ವಾರ, ಮೇ 16 ರಿಂದ ಮೇ 31ರ ನಡುವೆ ರಾಜ್ಯಗಳಿಗೆ 1.92 ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಇದರಲ್ಲಿ 162.5 ಲಕ್ಷ ಡೋಸ್ ಕೋವಿಶೀಲ್ಡ್ ಮತ್ತು 29.49 ಲಕ್ಷ ಡೋಸ್ ಕೋವಾಕ್ಸಿನ್ ಸೇರಿವೆ.