ತಿರುವನಂತಪುರ: ಕೇರಳದಲ್ಲಿ ಈವರೆಗೆ 15 ಮ್ಯೂಕೋರ್ಮೈಕೋಸಿಸ್ (ಕಪ್ಪು ಶಿಲೀಂಧ್ರ) ಪ್ರಕರಣಗಳು ವರದಿಯಾಗಿವೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಹಾಗೆಂದು ಗಾಬರಿಗೊಳ್ಳುವ ಅಂಶಗಳಿಲ್ಲ. 2019 ರಲ್ಲಿ 16 ಪ್ರಕರಣಗಳು ವರದಿಯಾಗಿದ್ದವು ಎಂದು ತಿಳಿಸಿದರು.
ಇದು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಹರಡುವ ರೋಗವಲ್ಲ. ಆದ್ದರಿಂದ ಅನಾರೋಗ್ಯ ಪೀಡಿತರಿಗೆ ಚಿಕಿತ್ಸೆ ನೀಡುವ ಮತ್ತು ಅವರಿಗೆ ಅಗತ್ಯವಾದ ಸಹಾಯವನ್ನು ನೀಡಲು ಭಯಾತಂಕಗಳಿಲ್ಲದೆ ಜನರು ಸಿದ್ಧರಾಗಿರಬೇಕು ಎಂದು ಅವರು ಆಗ್ರಹಿಸಿದರು.
ಅನಿಯಂತ್ರಿತ ಮಧುಮೇಹ ಇರುವವರಲ್ಲಿ ಈ ರೋಗ ಸಾಮಾನ್ಯವಾಗಿ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಅಂಗಾಂಗ ಕಸಿಗೆ ಒಳಗಾಗುವ ಜನರಲ್ಲಿ ಮತ್ತು ಕ್ಯಾನ್ಸರ್ ರೋಗಿಗಳಲ್ಲಿ ಈ ರೋಗ ಹೆಚ್ಚಾಗಿ ಕಂಡುಬರುತ್ತದೆ. ಭಾರತದಲ್ಲಿ ಸುಮಾರು ಶೇ. 47 ಮಂದಿಗೆ ಮಧುಮೇಹವು ಉಲ್ಬಣಾವಸ್ಥೆಯಲ್ಲಷ್ಟೇ ಗಮನಕ್ಕೆ ಬರುತ್ತದೆ ಎಂದು ಅವರು ತಿಳಿಸಿದರು.
ಕಪ್ಪು ಶಿಲೀಂಧ್ರ ರೋಗದಿಂದ ಬಳಲುತ್ತಿರುವ ಜನರಲ್ಲಿ ಕೇವಲ ಶೇ.25 ಜನರಿಗೆ ಮಾತ್ರ ಮಧುಮೇಹ ನಿಯಂತ್ರಣದಲ್ಲಿರುವುದು ಕಂಡುಬರುತ್ತಿದೆ. ಆದ್ದರಿಂದ, ಮಧುಮೇಹಿಗಳಲ್ಲಿ ಮ್ಯೂಕೋಮೈಕೋಸಿಸ್ ಅಪಾಯಕಾರಿಯಾಗುತ್ತಿರುವ ಪರಿಸ್ಥಿತಿ ಇದೆ ಎಂದು ಅವರು ಹೇಳಿದರು.