ತಿರುವನಂತಪುರ: ಕೋವಿಡ್ ತಡೆಗಟ್ಟುವ ಚಟುವಟಿಕೆಗಳಿಗಾಗಿ 1.5 ಕೋಟಿ ರೂ. ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ದೇಣಿಗೆ ನೀಡಿದ ಖ್ಯಾತ ಚಿತ್ರನಟ ಮೋಹನ್ ಲಾಲ್ ಅವರಿಗೆ ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಧನ್ಯವಾದ ಅರ್ಪಿಸಿದ್ದಾರೆ. ಮೋಹನ್ ಲಾಲ್ ಅವರ 61 ನೇ ಹುಟ್ಟುಹಬ್ಬದ ಅಂಗವಾಗಿ ನಿನ್ನೆ ಅವರು ಆಮ್ಲಜನಕ ಹಾಸಿಗೆಗಳು, ವೆಂಟಿಲೇಟರ್, ಐಸಿಯು ಹಾಸಿಗೆಗಳು ಮತ್ತು ಎಕ್ಸರೇ ಯಂತ್ರಗಳು ಸೇರಿದಂತೆ ವೈದ್ಯಕೀಯ ಉಪಕರಣಗಳನ್ನು ಕೇರಳ ವಿವಿಧ ಆಸ್ಪತ್ರೆಗಳಿಗೆ ಕೊಡುಗೆಯಾಗಿ ನೀಡಿದ್ದರು.
ರಾಜ್ಯ ಆರೋಗ್ಯ ಸಚಿವೆಯಾಗಿ ಅಧಿಕಾರ ವಹಿಸಿಕೊಂಡ ವೀಣಾ ಜಾರ್ಜ್ ಮೊದಲ ಕರ್ತವ್ಯವೆಂಬಂತೆ ಮೋಹನ್ ಲಾಲ್ ಅವರನ್ನು ಅಭಿನಂದಿಸಿ ಫೇಸ್‍ಬುಕ್ ಪೆÇೀಸ್ಟ್‍ನಲ್ಲಿ ಅಭಿನಂದನೆ ತಿಳಿಸಿದ್ದಾರೆ.
ವೀಣಾ ಜಾರ್ಜ್ ಅವರ ಫೇಸ್‍ಬುಕ್ ಪೋಸ್ಟ್ ನ ಪೂರ್ಣ ಆವೃತ್ತಿ:
ಕೋವಿಡ್ ತಡೆಗಟ್ಟುವಿಕೆಗಾಗಿ ಕೇರಳದ ಆಸ್ಪತ್ರೆಗಳಿಗೆ ವೈದ್ಯಕೀಯ ಉಪಕರಣಗಳನ್ನು ದಾನ ಮಾಡಿದ ಪ್ರೀತಿಯ ಮಲಯಾಳಂ ನಟ ಶ್ರೀ. ಮೋಹನ್ ಲಾಲ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಅವರ ಜನ್ಮದಿನದಂದು ಶ್ರೀ ಮೋಹನ್ ಲಾಲ್ ಅವರು 1.5 ಕೋಟಿ ರೂ. ನೆರವು ನೀಡಿರುವುದು ಸ್ತುತ್ಯರ್ಹ.
ಆಕ್ಸಿಜನ್ ಹಾಸಿಗೆಗಳು, ವೆಂಟಿಲೇಟರ್‍ಗಳು, ಐಸಿಯು ಹಾಸಿಗೆಗಳು ಮತ್ತು ಎಕ್ಸರೇ ಯಂತ್ರಗಳನ್ನು ದಾನ ಮಾಡಲಾಗಿದೆ. ಕಳಮಸ್ಸೆರಿ ವೈದ್ಯಕೀಯ ಕಾಲೇಜಿನ ವಾರ್ಡ್‍ಗಳಿಗೆ ಆಮ್ಲಜನಕ ಪೈಪ್‍ಲೈನ್ ಅಳವಡಿಸಲು ಸಹ ನೆರವು ನೀಡಲಾಗಿದೆ.
ಇಂದು ಬೆಳಿಗ್ಗೆ ದೂರವಾಣಿ ಕರೆಯಲ್ಲಿ, ಶ್ರೀ ಮೋಹನ್ ಲಾಲ್ ಅವರು ಆರೋಗ್ಯ ಸಚಿವರನ್ನು ಅಧಿಕಾರ ವಹಿಸಿಕೊಂಡಿದ್ದಕ್ಕಾಗಿ ಅಭಿನಂದಿಸಿದರು. ಕೋವಿಡ್ ರಕ್ಷಣಾ ಚಟುವಟಿಕೆ ಸೇರಿದಂತೆ ಆರೋಗ್ಯ ಕ್ಷೇತ್ರದ ಸವಾಲುಗಳಿಗೆ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ.