ತಿರುವನಂತಪುರ: 15 ನೇ ಕೇರಳ ವಿಧಾನಸಭೆಯ ಸ್ಪೀಕರ್ ಆಯ್ಕೆ ಇಂದು ನಡೆಯಲಿದೆ. ತ್ರಿತಲ ಶಾಸಕ ಎ.ಬಿ ರಾಜೇಶ್ ವಿರುದ್ಧ ಪ್ರತಿಪಕ್ಷದಿಂದ ಪಿ.ಸಿ ವಿಷ್ಣುನಾಥ್ ಅವರನ್ನು ಅಭ್ಯರ್ಥಿಯಾಗಿ ಯುಡಿಎಫ್ ಘೋಷಿಸಿದ್ದರೂ,ಸ್ಪರ್ಧೆ ಸಾಂಕೇತಿಕವಾಗಿದೆ. ಬೆಳಿಗ್ಗೆ 9 ಗಂಟೆಗೆ ಮತದಾನ ಆರಂಭಗೊಳ್ಳುತ್ತದೆ.
ಕೇರಳ ವಿಧಾನಸಭೆಯ 23 ನೇ ಸ್ಪೀಕರ್ ಅವರನ್ನು ಆಯ್ಕೆ ಮಾಡಲು ಸದಸ್ಯರು ಮತ ಚಲಾಯಿಸುವರು. ಬೆಳಿಗ್ಗೆ 11.30 ಕ್ಕೆ ಮತ ಎಣಿಕೆ ಆರಂಭವಾಗಲಿದೆ. ಬಳಿಕ ಉಪ ಸ್ಪೀಕರ್ ಚುನಾವಣೆ ನಡೆಯಲಿದೆ.ನಿಯೋಜಿತ ಅಭ್ಯರ್ಥಿ, ರಾಜೇಶ್ 10 ವರ್ಷಗಳ ಕಾಲ ಲೋಕಸಭೆಯ ಸದಸ್ಯರಾಗಿದ್ದರು ಆದರೆ ಇದು ವಿಧಾನಸಭೆಯಲ್ಲಿ ಅವರ ಮೊದಲ ಪ್ರವೇಶವಾಗಿದೆ. ಲೋಕಸಭೆ ಸದಸ್ಯರಾಗಿದ್ದ ವ್ಯಕ್ತಿ ಅಸೆಂಬ್ಲಿಯಲ್ಲಿ ಸ್ಪೀಕರ್ ಆಗುತ್ತಿರುವುದು ಇದೇ ಮೊದಲು.
ಪಿಣರಾಯಿ ವಿಜಯನ್ ಸರ್ಕಾರಕ್ಕೆ ಬಹುಮತವಿದ್ದರೂ, ವಿ.ಡಿ.ಸತೀಶನ್ ನೇತೃತ್ವದ ಸಂಸದೀಯ ಪಕ್ಷವು ರಾಜಕೀಯ ಹೋರಾಟದಿಂದ ಹಿಂದೆ ಸರಿಯದಿರಲು ನಿರ್ಧರಿಸಿದೆ. ಇದರ ಭಾಗವಾಗಿ ಪಿ.ಸಿ ವಿಷ್ಣುನಾಥ್ ಅವರನ್ನು ಸ್ಪೀಕರ್ ಅಭ್ಯರ್ಥಿಯಾಗಿ ಘೋಷಿಸಲಾಯಿತು.
15 ನೇ ಕೇರಳ ವಿಧಾನಸಭೆಯು ಶಾಸಕರ ಪ್ರಮಾಣವಚನ ನಿನ್ನೆ ನಡೆದಿತ್ತು. 136 ಶಾಸಕರು ಹಂಗಾಮಿ ಸ್ಪೀಕರ್ ಪಿಟಿಎ ರಹೀಂ ಅವರ ಮುಂದೆ ಪ್ರಮಾಣ ವಚನ ಸ್ವೀಕರಿಸಿದರು. ಸರ್ಕಾರದ ನೀತಿಯ ಬಗ್ಗೆ ಮೇ 28 ರಂದು ರಾಜ್ಯಪಾಲರು ಭಾಷಣ ಮಾಡುವರು. ಜೂನ್ 4 ಕ್ಕೆ ಹೊಸ ಬಜೆಟ್ ಮಂಡನೆಗೊಳ್ಳುವುದು. ಅಧಿವೇಶನ ಜೂನ್ 14 ರಂದು ಮುಕ್ತಾಯಗೊಳ್ಳಲಿದೆ.