ನವದೆಹಲಿ: ದೇಶದಲ್ಲಿ ದೈನಂದಿನ ಹೊಸ ಕೋವಿಡ್-19 ಪ್ರಕರಣಗಳು ಮತ್ತು ಸಾವುಗಳು ಕಡಿಮೆಯಾಗುವ ಆರಂಭಿಕ ಪ್ರವೃತ್ತಿ ಕಂಡುಬಂದಿದ್ದು, ಇದು ಸಾಂಕ್ರಾಮಿಕ ರೋಗದ ಎರಡನೇ ಅಲೆ ಕ್ಷೀಣಿಸುತ್ತಿದೆ ಎಂಬ ಸೂಚನೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಹೇಳಿದೆ.
ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಹಿರಿಯ ಅಧಿಕಾರಿಯೊಬ್ಬರು, ಮಹಾರಾಷ್ಟ್ರ, ಉತ್ತರ ಪ್ರದೇಶ, ದೆಹಲಿ ಮತ್ತು ಛತ್ತೀಸ್‌ಗಢ ಸೇರಿ 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ದೈನಂದಿನ ಹೊಸ ಕೋವಿಡ್ ಪಾಸಿಟಿವ್ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿದೆ ಎಂದರು.
ಆದರೆ ಕರ್ನಾಟಕ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಪಂಜಾಬ್ ಸೇರಿದಂತೆ 16 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ದೈನಂದಿನ ಹೊಸ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಪ್ರವೃತ್ತಿಯನ್ನು ತೋರಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಹದಿಮೂರು ರಾಜ್ಯಗಳಲ್ಲಿ ತಲಾ 1 ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ ಮತ್ತು 26 ರಾಜ್ಯಗಳಲ್ಲಿ ಪಾಸಿಟಿವ್ ಪ್ರಮಾಣ ಶೇಕಡಾ 15 ಕ್ಕಿಂತ ಹೆಚ್ಚು ಇದೆ ಎಂದು ಸರ್ಕಾರ ತಿಳಿಸಿದೆ.
ಕೊರೋನಾ ವೈರಸ್ ಸೋಂಕಿನ ಎರಡನೇ ಅಲೆಯಿಂದ ಇಡೀ ದೇಶ ತತ್ತರಿಸುತ್ತಿದೆ. ಆದಾಗ್ಯೂ, ದೈನಂದಿನ ಸಾವು ಮತ್ತು ಪಾಸಿಟಿವ್ ಪ್ರಕಣಗಳು ಕಡಿಮೆಯಾಗಲು ಪ್ರಾರಂಭಿಸಿರುವುದು ಆಶಾದಾಯಕ ಬೆಳವಣಿಗೆ.
ಕೊರೋನಾ 2ನೇ ಅಲೆಯ ಆರ್ಭಟ ಮಂಗಳವಾರ ಕೊಂಚ ತಗ್ಗಿದ್ದು, ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 3,29,942 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದೇ ಅವಧಿಯಲ್ಲಿ 3876 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,29,92,517ಕ್ಕೆ ಏರಿಕೆಯಾಗಿದ್ದು, ಸಾವಿಗೀಡಾದವರ ಸಂಖ್ಯೆ 2,49,992ಕ್ಕೆ ತಲುಪಿದೆ.