ನವದೆಹಲಿ: ದೇಶದಲ್ಲಿ ಕೊರೋನಾ ಎರಡನೇ ಅಲೆಗೆ ಕಾರಣವಾಗಿರುವ 'ಭಾರತೀಯ ರೂಪಾಂತರ' ಎಂದು ಕರೆಯಲ್ಪಡುವ ಬಿ.1.617 ರೂಪಾಂತರ ಪದ ಬಳಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕೇಂದ್ರ ಆರೋಗ್ಯ ಸಚಿವಾಲಯ ಡಬ್ಲ್ಯುಎಚ್‌ಒ 'ಭಾರತೀಯ' ಎಂಬ ಪದವನ್ನು ಎಲ್ಲೂ ಬಳಸಿಲ್ಲ ಎಂದು ಹೇಳಿದೆ.
ಬಿ.1.617 ಭಾರತದ ರೂಪಾಂತರ ಎಂದು ಡಬ್ಲ್ಯುಹೆಚ್‌ಒ ಎಲ್ಲೂ ಉಲ್ಲಂಖಿಸಿಲ್ಲ. ಈ ರೂಪಾಂತರವು ಜಾಗತಿಕ ಕಳವಳಕ್ಕೆ ಸಂಬಂಧಿಸಿದ್ದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿರುವುದಾಗಿ ಅನೇಕ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ಈ ಪೈಕಿ ಕೆಲವು ವರದಿಗಳಲ್ಲಿ ಅದನ್ನು ಭಾರತೀಯ ರೂಪಾಂತರ ಎಂದೂ ಉಲ್ಲೇಖಿಸಲಾಗಿದೆ. ಈ ವರದಿಗಳಲ್ಲಿ ಹುರುಳಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.
ಡಬ್ಲ್ಯುಎಚ್‌ಒ ತನ್ನ 32 ಪುಟಗಳ ದಾಖಲೆಯಲ್ಲಿ "ಇಂಡಿಯನ್ ವೇರಿಯಂಟ್" ಎಂಬ ಪದವನ್ನು ಕೊರೋನಾ ವೈರಸ್‌ನ ಬಿ .1.617 ಸ್ಟ್ರೈನ್‌ನೊಂದಿಗೆ ಸಂಯೋಜಿಸಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ವಾಸ್ತವವಾಗಿ, ಈ ವಿಷಯದ ಬಗ್ಗೆ ತನ್ನ ವರದಿಯಲ್ಲಿ "ಭಾರತೀಯ" ಎಂಬ ಪದವನ್ನು ಬಳಸಲಾಗಿಲ್ಲ ಎಂದು ಸಚಿವಾಲಯ ಹೇಳಿದೆ.
ಭಾರತದಲ್ಲಿ ಕೊರೋನಾ ಎರಡನೇ ಅಲೆ ಗಂಡಾಂತರವನ್ನೇ ಸೃಷ್ಟಿಸಿದೆ. ದೇಶದಲ್ಲಿ ದಿನಕ್ಕೆ ಬರೋಬ್ಬರಿ ಮೂರುವರೆ ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಅಲ್ಲದೆ ದಿನಕ್ಕೆ 4 ಸಾವಿರಕ್ಕೂ ಹೆಚ್ಚು ಜನರು ಸಾಯುತ್ತಿದ್ದಾರೆ.