ನವದೆಹಲಿ: 18-44 ವರ್ಷ ವಯಸ್ಸಿನವರು ಕೋವಿಡ್-19 ಲಸಿಕೆ ಹಾಕಿಸಿಕೊಳ್ಳಲು ಅನುಕೂಲವಾಗುವಂತೆ ಲಸಿಕಾ ಕೇಂದ್ರದಲ್ಲೇ ಕೋವಿನ್ ಆಯಪ್‌ನಲ್ಲಿ ನೇರ (ಆನ್-ಸೈಟ್) ನೋಂದಣಿ ಮತ್ತು ಅಪಾಯಿಂಟ್ಮೆಂಟ್ ಪಡೆಯುವ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಆದರೆ, ಈ ವೈಶಿಷ್ಟ್ಯವನ್ನು ಕೇವಲ ಸರ್ಕಾರಿ ಕೋವಿಡ್ ಲಸಿಕಾ ಕೇಂದ್ರಗಳಲ್ಲಿ ಮಾತ್ರ ಸಕ್ರಿಯಗೊಳಿಸಲಾಗಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.ಈ ವೈಶಿಷ್ಟ್ಯವು ಖಾಸಗಿ ಸಿವಿಸಿಗಳಿಗೆ ಲಭ್ಯವಿರುವುದಿಲ್ಲ ಮತ್ತು ಅವರು ತಮ್ಮ ಲಸಿಕಾ ವೇಳಾಪಟ್ಟಿಗಳನ್ನು ಆನ್‌ಲೈನ್ ಅಪಾಯಿಂಟ್ಮೆಂಟ್‌ಗಳಿಗಾಗಿ ಸ್ಲಾಟ್‌ಗಳೊಂದಿಗೆ ಪ್ರತ್ಯೇಕವಾಗಿ ಪ್ರಕಟಿಸಬೇಕಾಗುತ್ತದೆ.
ಲಸಿಕೆ ವ್ಯರ್ಥವಾಗುವುದನ್ನು ಕಡಿಮೆ ಮಾಡಲು ಮತ್ತು ಅರ್ಹ ಫಲಾನುಭವಿಗಳಿಗೆ ಲಸಿಕೆ ನೀಡಲು ಅನುಕೂಲವಾಗುವಂತೆ ಸ್ಥಳೀಯ ಸನ್ನಿವೇಶದ ಆಧಾರದ ಮೇಲೆ 18-44 ವರ್ಷ ವಯಸ್ಸಿನವರಿಗೆ ಆನ್-ಸೈಟ್ ನೋಂದಣಿ ಮತ್ತು ಅಪಾಯಿಂಟ್ಮೆಂಟ್ ನೀಡುವ ಬಗ್ಗೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ನಿರ್ಧರಿಸಬೇಕು ಎಂದು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ವೇಗವರ್ಧಿತ ರಾಷ್ಟ್ರೀಯ ಕೋವಿಡ್-19 ಲಸಿಕಾ ಕಾರ್ಯತಂತ್ರದ ಅನುಷ್ಠಾನದ ಭಾಗವಾಗಿ ಮೇ 1 ರಂದು 18 ರಿಂದ 44 ವರ್ಷದೊಳಗಿನ ಜನರಿಗೆ ನೀಡಲು ಕೇಂದ್ರ ನಿರ್ಧರಿಸಿತ್ತು.
ಲಸಿಕಾ ಕೆಂದ್ರಗಳಲ್ಲಿ ಗುಂಪು ಸೇರುವುದನ್ನು ತಪ್ಪಿಸಲು ಈ ಹಿಂದೆ ಆನ್‌ಲೈನ್ ಅಪಾಯಿಂಟ್ಮೆಂಟ್ ಮಾತ್ರ ನೀಡಲಾಗುತ್ತಿತ್ತು ಎಂದು ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.
ಆ ಬಳಿಕ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಲಸಿಕಾ ಅಭಿಯಾನದ ಬಗ್ಗೆ ನೀಡಿದ ಅಭಿಪ್ರಾಯಗಳನ್ನು ಆಧರಿಸಿ ಇದೀಗ ನೇರ ನೋಂದಣಿಗೆ ನಿರ್ಧರಿಸಲಾಗಿದೆ. 18-44 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವಾಗ ದಿನದಾಂತ್ಯಕ್ಕೆ ಕೆಲವೊಮ್ಮೆ ಯಾವುದೇ ಅಪಾಯಿಂಟ್ಮೆಂಟ್ ಇಲ್ಲದೆ ಕೆಲವು ಡೋಸ್‌ಗಳು ವ್ಯರ್ಥವಾಗುವ ಪ್ರಕರಣಗಳು ಕಂಡುಬಂದಿವೆ. ಹೀಗಾಗಿ, ಲಸಿಕಾ ಕೇಂದ್ರದಲ್ಲೇ ನೇರ ನೋಂದಣಿ ಮೂಲಕ ಲಸಿಕೆಗೆ ಅನುವುಮಾಡಿಕೊಡಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ.
18 ರಿಂದ 44 ವರ್ಷಗಳವರೆಗಿನ ಫಲಾನುಭವಿಗಳಿಗೆ ಆನ್-ಸೈಟ್ ನೋಂದಣಿ ಮತ್ತು ಅಪಾಯಿಂಟ್ಮೆಂಟ್ ವೈಶಿಷ್ಟ್ಯವನ್ನು ಬಳಸುವ ವ್ಯಾಪ್ತಿ ಮತ್ತು ವಿಧಾನದ ಬಗ್ಗೆ ಆಯಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರದ ನಿರ್ಧಾರವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಲ್ಲಾ ಜಿಲ್ಲಾ ಇಮ್ಯುನೈಸೇಶನ್ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆಗಳನ್ನು ನೀಡುವಂತೆ ಕೇಂದ್ರ ಆರೋಗ್ಯ ಸಚಿವಾಲಯವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.
ಈ ಮೂಲಕ, ನಿರ್ದಿಷ್ಟ ಸಮೂಹಗಳಿಗೆ ಸೇರಿದ ಫಲಾನುಭವಿಗಳಿಗೆ ಲಸಿಕೆ ಒದಗಿಸಲು ಸಂಪೂರ್ಣ ಕಾಯ್ದಿರಿಸಿದ ಅವಧಿಗಳನ್ನು ಸಹ ಆಯೋಜಿಸಬಹುದು. ಅಂತಹ ಸಂಪೂರ್ಣ ಕಾಯ್ದಿರಿಸಿದ ಲಸಿಕಾ ಅವಧಿ ಎಲ್ಲಿ ಆಯೋಜಿಸಲಾಗಿದೆಯೋ ಅಲ್ಲಿ ಫಲಾನುಭವಿಗಳಿಗೆ ಬೇಕಾದಷ್ಟು ಪ್ರಮಾಣದ ಲಸಿಕೆಗಳ ವ್ಯವಸ್ಥೆ ಮಾಡಬೇಕು.
ಲಸಿಕಾ ಕೇಂದ್ರಗಳಲ್ಲಿ ಜನದಟ್ಟಣೆ ತಪ್ಪಿಸಲು, 18-44 ವರ್ಷ ವಯಸ್ಸಿನವರಿಗೆ ಆನ್-ಸೈಟ್ ನೋಂದಣಿ ಮತ್ತು ನೇಮಕಾತಿಯನ್ನು ತೆರೆಯುವಾಗ ಸಾಕಷ್ಟು ಎಚ್ಚರಿಕೆ ವಹಿಸಬೇಕು ಎಂದು ಸಚಿವಾಲಯವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.