ನವದೆಹಲಿ: ಕೊರೊನಾ ವೈರಸ್‌ನ ಎರಡನೇ ಅಲೆ ದೇಶಾದ್ಯಂತ ಜನರನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ. ಬಹುತೇಕ ರಾಜ್ಯಗಳಲ್ಲಿ ಈಗ ಲಾಕ್‌ಡೌನ್ ಘೋಷಿಸಲಾಗಿದೆ. ಈ ಮಧ್ಯೆ ಸಕಾರಾತ್ಮಕ ಸುದ್ದಿಯೊಂದು ಬಂದಿದೆ. ದೇಶದ ವಾರದ ಪಾಸಿಟಿವಿಟಿ ದರದ 18.17ಕ್ಕೆ ಇಳಿಕೆಯಾಗಿದೆ. ಸೋಮವಾರ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಈ ವಿವರಗಳನ್ನು ನೀಡಿದೆ.
ಕಳೆದ 26 ದಿನಗಳ ನಂತರ ಭಾರತದಲ್ಲಿ ದಿನವೊಂದರಲ್ಲಿ ಪತ್ತೆಯಾದ ಪ್ರಕರಣಗಳ ಸಂಖ್ಯೆ ಮೊದಲ ಬಾರಿಗೆ 3 ಲಕ್ಷಕ್ಕಿಂತ ಕಡಿಮೆಯಾಗಿದೆ ಎಂದು ಸಚಿವಾಲಯ ಮಾಹಿತಿಯನ್ನು ನೀಡಿದೆ. ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ ಕಳೆದ 24 ಗಂಟೆಗಳಲ್ಲಿ 2,81,386 ಹೊರ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿದೆ.
ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಯಲ್ಲಿ ಅತಿ ಹೆಚ್ಚಿನ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು 34389 ಪ್ರಕರಣಗಳು ಪತ್ತೆಯಾಗಿದೆ. ಎರಡನೇ ಸ್ಥಾನದಲ್ಲಿ ತಮಿಳುನಾಡು ಇದ್ದು 33181 ಹೊಸ ಪ್ರಕರಣಗಳು ಪತ್ತೆಯಾಗಿದೆ. ಮೇ 9ರ ನಂತರ ಕೊರೊನಾ ಪ್ರಕರಣಗಳ ಸರಾಸರಿ ಕುಸಿತ ಕಂಡುಬಂದಿದೆ ಎಂದು ಸಚಿವಾಲಯ ತಿಳಿಸಿದೆ.
ಕಳೆದ 24 ಗಂಟೆಯಲ್ಲಿ 3,78,741 ಸೋಕಿತರು ಗುಣಮುಖರಾಗಿದ್ದು ಗುಣಮುಖರಾದವರ ಸಂಖ್ಯೆ 2,11,74,076ಕ್ಕೆ ಏರಿಕೆಯಾಗಿದೆ. ಈ ಮೂಲಕ ರಾಷ್ಟ್ರೀಯ ಕೊರೊನಾ ವೈರಸ್ ಗುಣಮುಖರಾದವರ ಪ್ರಮಾಣ 84.81ಕ್ಕೆ ಏರಿಕೆಯಾಗಿದೆ.