ಕೊಚ್ಚಿ: ಕುಟುಂಬಸ್ಥರು ಆಯೋಜಿಸಿದ್ದ ನಿಶ್ಚಿತಾರ್ಥ ಹಾಗೂ ವಿವಾಹ ಸಮಾರಂಭದಿಂದ 18 ಮಂದಿಗೆ ಸೋಂಕು ಹರಡಿ ಇಬ್ಬರ ಸಾವಿಗೆ ಕಾರಣವಾಗಿದೆ.
ಕೊಚ್ಚಿಯ ಚುಂಗಮ್ ಸಮೀಪದ ತೋಡಪುಜಾ ದಲ್ಲಿ ಏಪ್ರಿಲ್ 19 ರಂದು ಏರ್ಪಡಿಸಿದ್ದ ನಿಶ್ಚಿತಾರ್ಥ ಸಮಾರಂಭದಲ್ಲಿ ಕೋರೊನಾ ಸೋಂಕು ಹರಡಿ ಇಬ್ಬರು ಸಾವನ್ನಪ್ಪಿ 10 ಮಂದಿ ಸೋಂಕಿತರಾಗಿದ್ದಾರೆ.
ವಿದೇಶದಿಂದಲೂ ಆಗಮಿಸಿದ ಅತಿಥಿಗಳು ಸೇರಿದಂತೆ ಒಟ್ಟು 150 ಮಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ವಿದೇಶದಲ್ಲಿ ನೆಲೆಸಿದ್ದ ಕುಟುಂಬ ಮಗಳ ಮದುವೆ ಸಮಾರಂಭಕ್ಕಾಗಿ ಆಗಮಿಸಿತ್ತು.
ಏಪ್ರಿಲ್ 19 ರಂದು ನಿಶ್ಚಿತಾರ್ಥ ಮತ್ತು ಏಪ್ರಿಲ್ 22 ರಂದು ವಿವಾಹ ನಡೆದಿತ್ತು. ಸಮಾರಂಭದ ನಂತರ ಕೋವಿಡ್ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಕಂಡು ಬಂದಿತ್ತು, ಕುಟುಂಬದ ಆರು ಮಂದಿಗೆ ಕೋವಿಡ್ ಪಾಸಿಟಿವ್ ಬಂದಿತ್ತು. ಸಮಾರಂಭದಲ್ಲಿ ಭಾಗಿಯಾಗಿದ್ದ ಹಲವು ಸಂಬಂಧಿಕರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸಮಾರಂಭದ ಬಗ್ಗೆ ಕುಟುಂಬಸ್ಥರು ನಮಗೆ ಮಾಹಿತಿ ನೀಡಿರಲಿಲ್ಲ ಎಂದು ಕೌನ್ಸಿಲರ್ ಗಳು ತಿಳಿಸಿದ್ದಾರೆ. ಕಟ್ಟು ನಿಟ್ಟಾದ ನಿರ್ಬಂಧ ಜಾರಿಯಲ್ಲಿರದಿದ್ದರೂ ಸಮಾರಂಭ ಆಯೋಜಿಸುವಾಗ ಕೋವಿಡಿ ಶಿಷ್ಟಾಚಾರ ಪಾಲನೆ ಮಾಡಬೇಕಾಗಿದೆ ಎಂದು ಕೌನ್ಸಿಲರ್ ತಿಳಿಸಿದ್ದಾರೆ.
ಪರಿಸ್ಥಿತಿಯನ್ನು ಪೊಲೀಸರು ಮತ್ತು ಆರೋಗ್ಯ ಅಧಿಕಾರಿಗಳಿಗೆ ತಿಳಿಸಿದರೂ ಈ ಪ್ರದೇಶವನ್ನು ಇನ್ನೂ ಕಂಟೇನ್ಮೆಂಟ್ ವಲಯ ಎಂದು ಘೋಷಿಸಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ವಧುವಿನ ಇಬ್ಬರು ಸಂಬಂಧಿಕರಾದ ಚುಂಗಮ್‌ನ ಸಿ ಎಸ್ ಪುನ್ನುಸ್ (77) ಮತ್ತು ಚುಂಗಮ್ ಬಳಿಯ ಮ್ರಾಲಾದ ಜೋಸೆಫ್ ಸ್ಟೀಫನ್ (84) ಕ್ರಮವಾಗಿ ಭಾನುವಾರ ಮತ್ತು ಸೋಮವಾರ ನಿಧನರಾಗಿದ್ದಾರೆ.
ಮದುವೆ ಕಾರ್ಯಕ್ರಮದಲ್ಲಿ ನಾವು ಎಲ್ಲಾ ನಿಯಮಗಳನ್ನು ಪಾಲಿಸಿದ್ದೇವು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಫಿಜರ್ ಲಸಿಕೆ ತೆಗೆದುಕೊಂಡಿದ್ದರೂ ಕೋವಿಡ್ ಪಾಸಿಟಿವ್ ಬಂದಿದೆ, ಸಮಾರಂಭದಲ್ಲಿ ಸಾಮಾಜಿಕ ಅಂತರ ಸೇರಿದಂತೆ ಎಲ್ಲಾ ನಿಯಮ ಪಾಲಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಹೆಚ್ಚೆಚ್ಚು ಜನರು ಸೋಂಕಿಗೆ ಒಳಗಾಗುತ್ತಿರುವುದರಿಂದ, ಕೋವಿಡ್ ಪರೀಕ್ಷಿಸುವ ಪ್ರತಿಯೊಬ್ಬರೊಂದಿಗೆ ಸಂಪರ್ಕ ಸಾಧಿಸುವುದು ಮತ್ತು ಸಂಪರ್ಕದಲ್ಲಿರುವುದು ಕಷ್ಟಕರವಾಗುತ್ತಿದೆ. ಕೋವಿಡ್ -19 ವಿರುದ್ಧ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಪ್ರತಿಯೊಬ್ಬರ ಮೇಲಿದೆ ಎಂದು ನೋಡಲ್ ಅಧಿಕಾರಿ ಡಾ. ಸುಷ್ಮಾ ಹೇಳಿದ್ದಾರೆ.