ನವದೆಹಲಿ: 10ನೇ ತರಗತಿ ಅಂಕಗಳನ್ನು ನಿಗದಿಪಡಿಸಿ ಬೋರ್ಡ್ ಗೆ ಸಲ್ಲಿಸಲು ಜೂನ್ 30ರವರೆಗೂ ಶಾಲೆಗಳಿಗೆ ಗಡುವನ್ನು ಸಿಬಿಎಸ್ ಇ ಮಂಗಳವಾರ ವಿಸ್ತರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದೆ ಜೂನ್ 11 ರೊಳಗೆ ಅಂಕ ನಿಗದಿಪಡಿಸುವ ಇಡೀ ಕಾರ್ಯ ಪೂರ್ಣಗೊಂಡಿರಬೇಕು ಎಂದು ಜೂನ್ 20 ರಂದು ಫಲಿತಾಂಶ ಪ್ರಕಟಿಸಲಾಗುವುದು ಎಂದು ಈ ಹಿಂದೆ ಬೋರ್ಡ್ ಪ್ರಕಟಿಸಿತ್ತು.
ಕೋವಿಡ್-19 ಸಾಂಕ್ರಾಮಿಕ ಪರಿಸ್ಥಿತಿಯಿಂದ ಅನೇಕ ರಾಜ್ಯಗಳಲ್ಲಿ ಲಾಕ್ ಡೌನ್ ಹೇರಿರುವುದರಿಂದ ಶಿಕ್ಷಕರು ಹಾಗೂ ಇತರ ಸಿಬ್ಬಂದಿಯ ಸುರಕ್ಷತೆ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಶಿಕ್ಷಕರ ಆರೋಗ್ಯ ಮತ್ತು ಸುರಕ್ಷತೆಗೆ ಸಿಬಿಎಸ್ ಇ ಹೆಚ್ಚಿನ ಆದ್ಯತೆ ನೀಡುತ್ತದೆ. ಪ್ರಸ್ತುತದಲ್ಲಿನ ಸಾಂಕ್ರಾಮಿಕ ಪರಿಸ್ಥಿತಿ ಮತ್ತು ಅನೇಕ ರಾಜ್ಯಗಳಲ್ಲಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಅಫಿಲಿಯೆಟೆಡ್ ಶಾಲೆಗಳ ಶಿಕ್ಷಕರು ಮತ್ತು ಇತರ ಸಿಬ್ಬಂದಿ ಸುರಕ್ಷತೆಯ ನಿಟ್ಟಿನಲ್ಲಿ ದಿನಾಂಕವನ್ನು ಬೋರ್ಡ್ ವಿಸ್ತರಿಸಿದೆ ಎಂದು ಸಿಬಿಎಸ್ ಇ ಪರೀಕ್ಷಾ ನಿಯಂತ್ರಕ ಸನ್ಯಂ ಭಾರದ್ವಾಜ್ ಹೇಳಿದ್ದಾರೆ.
ಜೂನ್ 30ರೊಳಗೆ ಅಂಕಗಳನ್ನು ಬೋರ್ಡ್ ಗೆ ಸಲ್ಲಿಸಬೇಕು, ಉಳಿದ ಚಟುವಟಿಕೆಗಳಿಗೆ, ಸಿಬಿಎಸ್ ಐ ನೀಡಲಾದ ಯೋಜನೆ ಆಧಾರದ ಮೇಲೆ ಫಲಿತಾಂಶ ಸಮಿತಿಗಳು ತಮ್ಮ ಸ್ವಂತ ವೇಳಾಪಟ್ಟಿಯನ್ನು ಮಾಡಬಹುದು ಎಂದು ಅವರು ತಿಳಿಸಿದ್ದಾರೆ.
ನೀತಿಯ ಪ್ರಕಾರ, ಪ್ರತಿ ವರ್ಷ ಆಂತರಿಕ ಮೌಲ್ಯಮಾಪನಕ್ಕಾಗಿ ಪ್ರತಿ ವಿಷಯದಲ್ಲಿ 20 ಅಂಕಗಳನ್ನು ನೀಡಲಾಗುತ್ತದೆ.ಇಡೀ ವರ್ಷದಾದ್ಯಂತ ವಿವಿಧ ಪರೀಕ್ಷೆಗಳು ಅಥವಾ ಟೆಸ್ಟ್ ಗಳಲ್ಲಿ ವಿದ್ಯಾರ್ಥಿಗಳ ಕಾರ್ಯಕ್ಷಮತೆ ಆಧಾರದ ಮೇಲೆ 80 ಅಂಕಗಳನ್ನು ನೀಡಲಾಗುತ್ತದೆ. ಅಂತಿಮ ಅಂಕಗಳಿಗಾಗಿ ಪ್ರಿನ್ಸಿಪಾಲ್ ಮತ್ತು ಏಲು ಶಿಕ್ಷಕರನ್ನೊಳಗೊಂಡ ಫಲಿತಾಂಶ ಸಮಿತಿಯನ್ನು ರಚಿಸುವಂತೆ ಬೋರ್ಡ್ ಶಾಲೆಗಳಿಗೆ ಹೇಳಿದೆ.
ಇಡೀ ವರ್ಷದಲ್ಲಿ ಸಾಕಾಗುವಷ್ಟು ಟೆಸ್ಟ್ ಗಳಿಗೆ ಹಾಜರಾಗದ ವಿದ್ಯಾರ್ಥಿಗಳಿಗೆ ಮೇ 15 ರೊಳಗೆ ಶಾಲೆಯಿಂದ ಆನ್ ಲೈನ್ ಅಥವಾ ಟೆಲಿಫೋನ್ ಮೂಲಕ ಮೌಲ್ಯಮಾಪನ ನಡೆಸಬೇಕು ಮತ್ತು ಮೇ 25ರೊಳಗೆ ಅಂತಿಮ ಫಲಿತಾಂಶ ನೀಡಬೇಕು ಎಂದು ಭಾರದ್ವಾಜ್ ತಿಳಿಸಿದ್ದಾರೆ. ಕೋವಿಡ್-19 ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಸಿಬಿಎಸ್‌ಇ ಏಪ್ರಿಲ್ 14 ರಂದು 10ನೇ ತರಗತಿ ಪರೀಕ್ಷೆಯನ್ನು ರದ್ದುಪಡಿಸಿ, 12ನೇ ತರಗತಿ ಪರೀಕ್ಷೆಯನ್ನು ಮುಂದೂಡಿತ್ತು.