ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ದೈನಂದಿನ ಚೇತರಿಕೆ ಪ್ರಕರಣಗಳ ಸಂಖ್ಯೆ ಸತತ 11ನೇ ದಿನವೂ ಹೊಸ ಪ್ರಕರಣಗಳನ್ನು ಮೀರಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ.
ದೇಶಾದ್ಯಂತ ಕಳೆದ 24 ಗಂಟೆಯಲ್ಲಿ 3,02,544 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಇದರೊಂದಿಗೆ ಕೊರೋನಾದಿಂದ ಚೇತರಿಸಿಕೊಂಡವರ ಸಂಖ್ಯೆ 2,37,28,011ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.ಇದೇ ಅವಧಿಯಲ್ಲಿ 2,22,315 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ ಎಂದು ಇಂದು ಬೆಳಗ್ಗೆ ನವೀಕರಿಸಿದ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.
ದೇಶದಲ್ಲಿ ಚೇತರಿಕೆ ಪ್ರಮಾಣ ಶೇಕಡಾ 8.09 ರಷ್ಟಿದ್ದು, ವಾರದ ಪಾಸಿಟಿವ್ ಪ್ರಮಾಣ ಸಹ ಶೇಕಡಾ 12.66ಕ್ಕೆ ಇಳಿದಿದ್ದು, ಇನ್ನೂ 27,20,716 ಸಕ್ರಿಯ ಪ್ರಕರಣಗಳಿವೆ ಎಂದು ಸಚಿವಾಲಯ ತಿಳಿಸಿದೆ.
ಭಾರತದ ಒಟ್ಟು ಸಕ್ರಿಯ ಪ್ರಕರಣಗಳ ಪೈಕಿ ಶೇಕಡಾ 71.62 ರಷ್ಟು ಪ್ರಕರಣಗಳು ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ರಾಜಸ್ಥಾನ ಮತ್ತು ಒಡಿಶಾದಲ್ಲಿವೆ ಎಂದು ಕೇಂದ್ರ ಹೇಳಿದೆ.