ನವದೆಹಲಿ: ಕೋವಿಡ್-19 ಸಂದರ್ಭದಲ್ಲಿ ಸಾರ್ವಜನಿಕ ಆರೋಗ್ಯಕ್ಕೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ 12 ಸದಸ್ಯರ ರಾಷ್ಟ್ರೀಯ ಕಾರ್ಯಪಡೆಯನ್ನು ರಚಿಸಿದೆ.
ವೈಜ್ಞಾನಿಕ ಮತ್ತು ಸಂಬಂಧಪಟ್ಟ ಕ್ಷೇತ್ರದೆಡೆಗೆ ವಿಶೇಷ ಜ್ಞಾನವನ್ನು ಹೊಂದಿರುವ ಈ ಕಾರ್ಯಪಡೆ, : ವೈದ್ಯಕೀಯ ಆಮ್ಲಜನಕವನ್ನು ಸುವ್ಯವಸ್ಥಿತ ರೀತಿಯಲ್ಲಿ ವಿತರಿಸುವುದೂ ಸೇರಿದಂತೆ ಕೋವಿಡ್-19 ಸಂದರ್ಭದಲ್ಲಿ ಸಾರ್ವಜನಿಕ ಆರೋಗ್ಯಕ್ಕೆ ಅಗತ್ಯವಿರುವ ಸೌಲಭ್ಯಗಳು ಜನತೆಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಲಿದೆ.
ನ್ಯಾ.ಡಿ.ವೈ ಚಂದ್ರಚೂಡ್ ಹಾಗೂ ನ್ಯಾ.ಎಂ.ಆರ್ ಶಾ ನೇತೃತ್ವದ ಪೀಠ ಈ ಕಾರ್ಯಪಡೆಯನ್ನು ರಚಿಸಿದ್ದು, ವೈದ್ಯಕೀಯ ಆಮ್ಲಜನಕ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಿಗೆ ವೈಜ್ಞಾನಿಕವಾಗಿ ಹಂಚಿಕೆಯಾಗುವುದಕ್ಕೆ ಅಗತ್ಯವಿರುವ ವಿಧಾನವನ್ನೂ ಕಾರ್ಯಪಡೆ ರೂಪಿಸಲಿದೆ ಎಂದು ಹೇಳಿದೆ.
ಕೇಂದ್ರದ ಕ್ಯಾಬಿನೆಟ್ ಕಾರ್ಯದರ್ಶಿ ಕಾರ್ಯಪಡೆಯ ಸಂಚಾಲಕರಾಗಿರಲಿದ್ದು, ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಕೂಡ ಸುಪ್ರೀಂ ಕೋರ್ಟ್ ರಚಿಸಿದ 12 ಸದಸ್ಯರ ಸಮಿತಿಯ ಭಾಗವಾಗಿರುತ್ತಾರೆ. ಹಾಗೂ ಅಗತ್ಯವಿದ್ದಲ್ಲಿ ಹೆಚ್ಚುವರಿ ಕಾರ್ಯದರ್ಶಿ ಹುದ್ದೆಗಿಂತ ಕಡಿಮೆಯಲ್ಲದ ಅಧಿಕಾರಿಯನ್ನು ಸಮಿತಿಗೆ ನೇಮಕ ಮಾಡಬಹುದೆಂದು ಕೋರ್ಟ್ ಹೇಳಿದೆ.
ಕಾರ್ಯಪಡೆಯ ಸದಸ್ಯರ ವಿವರ ಹೀಗಿದೆ.
ಡಾ. ಭಬತೋಷ್ ಬಿಸ್ವಾಸ್: ಕೋಲ್ಕತ್ತಾದ ಪಶ್ಚಿಮ ಬಂಗಾಳ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ
ಡಾ.ದೇವೇಂದರ್ ಸಿಂಗ್ ರಾಣಾ: ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯ ಆಡಳಿತ ಮಂಡಳಿ ಅಧ್ಯಕ್ಷ
ಡಾ.ದೇವಿ ಪ್ರಸಾದ್ ಶೆಟ್ಟಿ: ಬೆಂಗಳೂರಿನ ನಾರಾಯಣ ಹೆಲ್ತ್‌ಕೇರ್‌ನ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ
ಡಾ.ಗಗನ್‌ದೀಪ್ ಕಾಂಗ್: ತಮಿಳುನಾಡಿನ ವೆಲ್ಲೂರು ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕ
ಡಾ.ಜೆ.ವಿ.ಪೀಟರ್: ತಮಿಳುನಾಡಿನ ವೆಲ್ಲೂರು ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನ ನಿರ್ದೇಶಕ
ಡಾ.ನರೇಶ್ ಟ್ರೆಹನ್: ಗುರುಗ್ರಾಮ್ನ ಮೆಡಂತ ಆಸ್ಪತ್ರೆ ಮತ್ತು ಹೃದಯ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ
ಡಾ.ರಾಹುಲ್ ಪಂಡಿತ್: ಕ್ರಿಟಿಕಲ್ ಕೇರ್ ಮೆಡಿಸಿನ್ ಮತ್ತು ಐಸಿಯು, ಫೋರ್ಟಿಸ್ ಆಸ್ಪತ್ರೆ, ಮುಲುಂಡ್ (ಮುಂಬೈ, ಮಹಾರಾಷ್ಟ್ರ) ಮತ್ತು ಕಲ್ಯಾಣ್ (ಮಹಾರಾಷ್ಟ್ರ) ನಿರ್ದೇಶಕ
ಡಾ.ಸೌಮಿತ್ರ ರಾವತ್: ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಗ್ಯಾಸ್ಟ್ರೋಎಂಟರಾಲಜಿ ಮತ್ತು ಪಿತ್ತಜನಕಾಂಗ ಕಸಿ ವಿಭಾಗದ ಅಧ್ಯಕ್ಷ ಮತ್ತು ಮುಖ್ಯಸ್ಥ
ಹಿರಿಯ ಪ್ರಾಧ್ಯಾಪಕ ಮತ್ತು ಹೆಪಟಾಲಜಿ ವಿಭಾಗದ ಮುಖ್ಯಸ್ಥ ಡಾ.ಶಿವ ಕುಮಾರ್ ಸರಿನ್, ದೆಹಲಿಯ ಇನ್ಸ್ಟಿಟ್ಯೂಟ್ ಆಫ್ ಲಿವರ್ ಅಂಡ್ ಬಿಲಿಯರಿ ಸೈನ್ಸ್ (ಐಎಲ್ಬಿಎಸ್) ನಿರ್ದೇಶಕ
ಡಾ.ಜರೀರ್ ಎಫ್ ಉಡ್ವಾಡಿಯಾ: ಹಿಂದೂಜಾ ಆಸ್ಪತ್ರೆ, ಬ್ರೀಚ್ ಕ್ಯಾಂಡಿ ಆಸ್ಪತ್ರೆ ಮತ್ತು ಪಾರ್ಸಿ ಜನರಲ್ ಆಸ್ಪತ್ರೆ, ಮುಂಬೈನ ಸಲಹೆಗಾರ ಹಾಗೂ ವೈದ್ಯ