ನವದೆಹಲಿ: ಹೊಸ ಕೋವಿಡ್-19 ಲಸಿಕೆ ನೀತಿಯ ಅಡಿಯಲ್ಲಿ 18-45 ವಯಸ್ಸಿನ 59 ಕೋಟಿ ಮಂದಿಗೆ ಲಸಿಕೆ ನೀಡುವುದಕ್ಕೆ 122 ಕೋಟಿ ಲಸಿಕೆ ಡೋಸ್ ಅಗತ್ಯ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಸಿದೆ.
"ಅತ್ಯಂತ ಕಡಿಮೆ ಅವಧಿಯಲ್ಲಿ ಶೇ.100 ರಷ್ಟು ಲಸಿಕೆ ಅಭಿಯಾನವನ್ನು ತಲುಪುವುದು ತನ್ನ ಆದ್ಯತೆಯಾಗಿದೆ. ಲಭ್ಯವಿರುವ ಸಂಪನ್ಮೂಲಗಳು ಹಾಗೂ ಲಸಿಕೆ ಡೋಸ್ ಗಳನ್ನು ಗಮದಲ್ಲಿಟ್ಟುಕೊಂಡು ಈ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತಿದೆ ಎಂದು ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ.
ಮೊದಲ ಆದ್ಯತೆ ಆರೋಗ್ಯ ಕಾರ್ಯಕರ್ತರಿಗೆ ಇರಲಿದೆ. 2021 ರ ಮಧ್ಯ ವರ್ಷದ ವೇಳೆಗೆ 18-45 ವಯಸ್ಸಿನ 59 ಕೋಟಿ ಮಂದಿ ಇದ್ದಾರೆ. ಇವರಿಗೆ ಲಸಿಕೆ ನೀಡುವುದಕ್ಕೆ 122 ಕೋಟಿ ಲಸಿಕೆಯ ಅಗತ್ಯವಿದೆ. ಈ ಪೈಕಿ ಒಂದಷ್ಟು ಲಸಿಕೆಗಳು ಪೋಲಾಗುವುಗದನ್ನು ತಪ್ಪಿಸುವ ಸಾಧ್ಯತೆ ಕಡಿಮೆ ಎಂದು ಹೇಳಿದೆ.
ಕೋವಿಶೀಲ್ಡ್, ಕೋವ್ಯಾಕ್ಸಿನ್ ಗಳನ್ನು ಹೊರತುಪಡಿಸಿದ ಲಸಿಕೆಗಳನ್ನು ಖರೀದಿಸುವುದಕ್ಕೆ ಕ್ರಮ ಕೈಗೊಂಡಿದ್ದು, ವಿದೇಶದಲ್ಲಿ ತಯಾರಾದ ಕೋವಿಡ್-19 ಲಸಿಕೆಗಳ ಅನುಮತಿ ಪ್ರಕ್ರಿಯೆಯನ್ನು ತ್ವರಿತಗೊಳಿಸಿದೆ ಎಂದು ಕೇಂದ್ರ ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿದೆ.