ಚೆನ್ನೈ: ಕೋವಿಡ್-19 ಎರಡನೇ ಅಲೆ ಇಸ್ರೋ ರಾಕೆಟ್ ಸ್ಟೇಷನ್ ನ್ನು ಕಾಡುತ್ತಿದೆ. ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ (ಎಸ್ ಡಿಎಸ್ ಸಿ) ದಲ್ಲಿ 350 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಕನಿಷ್ಟ ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದಾರೆ.
ಎಸ್ ಡಿಎಸ್ ಸಿ ನಲ್ಲಿರುವ ಮೂಲಗಳು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ್ದು, ತಿರುಪತಿ ಲೋಕಸಭಾ ಉಪಚುನಾವಣೆಯ ಪರಿಣಾಮವಾಗಿ ಕೋವಿಡ್-19 ಏರಿಕೆಯಾಗಿದೆ. ಎಸ್ ಡಿಎಸ್ ಸಿ ಉದ್ಯೋಗಿಗಳು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿದ್ದರು,
ಪ್ರತಿ ದಿನ ಸರಾಸರಿ 30-40 ಕೋವಿಡ್-19 ಪ್ರಕರಣಗಳು ವರದಿಯಾಗುತ್ತಿದ್ದು, ಬಾಹ್ಯಾಕಾಶ ಕೇಂದ್ರದ ಚಟುವಟಿಕೆಗಳನ್ನು ಕಡಿಮೆ ಮಾಡುವ ಅನಿವಾರ್ಯ ಪರಿಸ್ಥಿತಿ ಉಂಟಾಗಿದೆ. ಸರದಿಯ ಪ್ರಕಾರ ಶೇ.50 ರಷ್ಟು ಸಿಬ್ಬಂದಿಗಳು ಮಾತ್ರವೇ ಕರ್ತವ್ಯಕ್ಕೆ ಹಾಜರಾಗುತ್ತಿದ್ದು, ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಕರ್ತವ್ಯಕ್ಕೆ ಹಾಜಾರಾಗುವುದರಿಂದ ವಿನಾಯಿತಿ ನೀಡಲಾಗಿದೆ.
ಈ ಬಗ್ಗೆ ಎಕ್ಸ್ ಪ್ರೆಸ್ ಜೊತೆಗೆ ನೆಲ್ಲೂರ್ ನ ಜಿಲ್ಲಾಧಿಕಾರಿ ಕೆವಿಎನ್ ಚಕ್ರಧರ್ ಬಾಬು ಮಾತನಾಡಿದ್ದು, "ಶ್ರೀಹರಿಕೋಟಾದ ಟೌನ್ ಶಿಪ್ ನ ಒಳಭಾಗದಲ್ಲಿ ಪ್ರಕರಣಗಳು ಏರಿಕೆಯಾಗುತ್ತಿವೆ. ಆದರೆ ಪರಿಸ್ಥಿತಿ ನಿಯಂತ್ರಣದಲ್ಲಿದೆ" ಎಂದು ಹೇಳಿದ್ದಾರೆ.
ನಾವು ಎಲ್ಲಾ ಅಗತ್ಯ ನೆರವನ್ನು ನೀಡುತ್ತಿದ್ದೇವೆ, ಎಸ್ ಡಿಎಸ್ ಸಿ ಉದ್ಯೋಗಿಗಳಿಗೆ 1,100 ಡೋಸ್ ಗಳಷ್ಟು ಲಸಿಕೆಗಳನ್ನು ಪೂರೈಕೆ ಮಾಡಿದ್ದೇವೆ, ಬೇಡಿಕೆ ಇರುವ 900 ಡೋಸ್ ಗಳನ್ನು ನಾವು ಶೀಘ್ರವೇ ಪೂರೈಕೆ ಮಾಡುತ್ತೇವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಎಸ್ ಡಿಎಸ್ ಸಿ ನಿರ್ದೇಶಕ ರಾಜರಾಜನ್ ಕೋವಿಡ್-19 ನಿಯಂತ್ರಣ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಲ್ಲಾ ಉದ್ಯೋಗಿಗಳಿಗೂ ಕರೆ ನೀಡಿದ್ದಾರೆ.
"ಎಸ್ ಡಿಎಸ್ ಸಿ ತನ್ನ ಪ್ರಯೋಗಾಲಯಗಳಲ್ಲಿ ಕೋವಿಡ್-19 ಟೆಸ್ಟಿಂಗ್ ಟ್ರೇಸಿಂಗ್ ನ್ನು ಸಮರ್ಥವಾಗಿ ನಡೆಸಲು ಸಜ್ಜುಗೊಂಡಿದೆ, "ನಮ್ಮ ಕ್ಲಿನಿಕಲ್ ಪ್ರಯೋಗಾಲಯಗಳು ಅದೇ ದಿನದಂದು ಪರೀಕ್ಷೆ ಮಾಡಿ ಅಂದೇ ಫಲಿತಾಂಶವನ್ನೂ ನೂಡಲಿವೆ. ಐಸೊಲೇಷನ್ ಗೆ ವ್ಯವಸ್ಥೆ ಇದ್ದು, ಕೋವಿಡ್-19 ಪ್ರಾರಂಭಿಕ ಲಕ್ಷಣ ಹೊಂದಿರುವವರಿಗೆ ಚಿಕಿತ್ಸೆ ನೀಡುವ ಆಸ್ಪತ್ರೆ ಮೂಲಸೌಕರ್ಯಗಳನ್ನು ಹೊಂದಿದ್ದೇವೆ" ಎಂದು ರಾಜರಾಜನ್ ಮಾಹಿತಿ ನೀಡಿದ್ದಾರೆ.