ನವದೆಹಲಿ: ಕೋವಿಡ್-19 2ನೇ ಅಬ್ಬರ ಮುಂದುವರೆದಿರುವಂತೆಯೇ ದೆಹಲಿಯಲ್ಲಿ ಹೇರಲಾಗಿರುವ ಲಾಕ್ಡೌನ್ ಅನ್ನು ಮತ್ತೆ ಒಂದು ವಾರಗಳ ಕಾಲ ಮುಂದುವರೆಸಲಾಗುತ್ತದೆ ಎಂದು ದೆಹಲಿ ಸರ್ಕಾರ ಶನಿವಾರ ಘೋಷಣೆ ಮಾಡಿದೆ.
ದೇಶಾದ್ಯಂತ ಮಾರಕ ಕೊರೋನಾ ವೈರಸ್ ನ 2ನೇ ಅಲೆಯ ಅಬ್ಬರ ಜೋರಾಗಿರುವಂತೆಯೇ ದೆಹಲಿಯಲ್ಲೂ ಸೋಂಕಿತರ ಸಂಖ್ಯೆ ಮಿತಿ ಮೀರಿ ಏರಿಕೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯಲ್ಲಿ ವಿಧಿಸಲಾಗಿರುವ ಲಾಕ್ಡೌನ್ ಅನ್ನು ಮತ್ತೆ ಒಂದು ವಾರಗಳ ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ. ನೂತನ ಆದೇಶದಂತೆ ಮೇ 10ರವರೆಗೂ ಲಾಕ್ಡೌನ್ ಜಾರಿಯಲ್ಲಿರಲಿದ್ದು, ದೆಹಲಿ ಸರ್ಕಾರ ಈ ವರೆಗೂ 3 ಬಾರಿ ಲಾಕ್ಡೌನ್ ಅನ್ನು ವಿಸ್ತಕಣೆ ಮಾಡಿದೆ.
ಕೊರೋನಾ ವೈರಸ್ ಸಾಂಕ್ರಾಮಿಕ ಆರಂಭವಾದಾಗಿನಿಂದಲೂ ಈ ವರೆಗೂ ದೆಹಲಿ ಅತ್ಯಂತ ಭೀಕರ ಪರಿಸ್ಥಿತಿ ಎದುರಿಸುತ್ತಿದೆ. ದೆಹಲಿಯ ಬಹುತೇಕ ಆಸ್ಪತ್ರೆಗಳು ಬೆಡ್ ಮತ್ತು ವೈದ್ಯಕೀಯ ಆಕ್ಸಿಜನ್ ಕೊರತೆ ಎದುರಿಸುತ್ತಿದ್ದು, ಸೋಂಕಿತರು ಬೆಡ್ ಗಳು ಸಿಗದೇ ಪರದಾಡುತ್ತಿದ್ದಾರೆ. ಇದೇ ಆಕ್ಸಿಜನ್ ಕೊರತೆಯಿಂದಾಗಿ ದೆಹಲಿಯ ಬಾಟ್ರಾ ಆಸ್ಪತ್ರೆಯ ಸೋಂಕಿತ ವೈದ್ಯಾಧಿಕಾರಿ ಸೇರಿದಂತೆ 10 ಮಂದಿ ರೋಗಿಗಳು ಸಾವನ್ನಪ್ಪಿದ್ದರು.
ದೆಹಲಿಯಲ್ಲಿ ಶುಕ್ರವಾರ ದಾಖಲೆ ಪ್ರಮಾಣದ ಅಂದರೆ 27,047 ಹೊಸ ಸೋಂಕು ಪ್ರಕರಣಗಳು ದಾಖಲಾಗಿತ್ತು. ಅಂತೆಯೇ 375 ಮಂದಿ ಸಾವನ್ನಪ್ಪಿದ್ದರು. ಈ ವರೆಗಿನ ಹೊಸ ದಾಖಲೆಯಾಗಿತ್ತು. ಅಂತೆಯೇ ದೆಹಲಿಯಲ್ಲಿನ ಸೋಂಕು ಸಕಾರಾತ್ಮಕ ಪ್ರಮಾಣ ಶೇ.32.69ಕ್ಕೆ ಏರಿಕೆಯಾಗಿದೆ.